ದಾವಣಗೆರೆ: 50,000 ರೂ. ಲಂಚ ಪಡೆಯುತ್ತಿದ್ದಾಗಲೇ ಎಎಸ್ಐ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣೆಯ ಎಎಸ್ಐ ಈರಣ್ಣ ಲೋಕಾಯುಕ್ತ ಬಲೆಗೆ ಬಿದ್ದವರು.
ಗಲಾಟೆ ಪ್ರಕರಣದ ದೋಷಾರೋಪಟ್ಟಿಯಿಂದ ಇಬ್ಬರ ಹೆಸರನ್ನು ಕೈಬಿಡಲು ಆರೋಪಿಯಿಂದ 50,000 ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ ಈರಣ್ಣ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಕಂಠ ಆಚಾರ್ಯ ಅವರ ತಾಯಿ ಮತ್ತು ಪತ್ನಿ ವಿರುದ್ಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತಾಯಿ, ಪತ್ನಿ ಹೆಸರನ್ನು ದೋಷಾರೋಪಟ್ಟಿಯಿಂದ ಕೈ ಬಿಡಲು ಎಎಸ್ಐ ಈರಣ್ಣ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಒಂದು ಲಕ್ಷ ರೂಪಾಯಿ ಕೊಡುವಂತೆ ಕೇಳಿದ್ದು, ಮೊದಲ ಕಂತಿನಲ್ಲಿ 50 ಸಾವಿರ ರೂ. ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಲೋಕಾಯುಕ್ತ ಪೊಲೀಸರಿಗೆ ಮಣಿಕಂಠ ಆಚಾರ್ಯ ದೂರು ನೀಡಿದ್ದು, ಹಣ ಸ್ವೀಕರಿಸುವಾಗ ದಾಳಿ ನಡೆಸಿ ಲಂಚದ ಹಣದ ಸಹಿತ ಅವರನ್ನು ವಶಕ್ಕೆ ಪಡೆಯಲಾಗಿದೆ.