ಸರ್ಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಮದ್ಯ ಸೇವಿಸಿ ಶಾಲೆಗೆ ಬರ್ತಿದ್ದಾರೆಂದು ದೂರು ಬಂದ ಹಿನ್ನೆಲೆ ತಪಾಸಣೆಗೆಂದು ಬಂದ ಅಧಿಕಾರಿಗಳ ಕೈಗೆ ಸಿಗದೇ ಶಿಕ್ಷಕ ನಾಪತ್ತೆಯಾಗಿದ್ದಾನೆ.
ಹರಿಯಾಣದ ಫತೇಹಾಬಾದ್ ಜಿಲ್ಲೆಯ ಭುನಾ ತಾಲೂಕು ಧನಿ ಗೋಪಾಲ್ ಗ್ರಾಮದ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಆತಂಕಕಾರಿ ಘಟನೆಯೊಂದರಲ್ಲಿ ವಿದ್ಯಾರ್ಥಿಗಳು ತಮ್ಮ ದೈಹಿಕ ಶಿಕ್ಷಣ ಶಿಕ್ಷಕ (ಪಿಟಿಐ) ಜಿತೇಂದರ್ ಸಿಂಗ್ ವಿರುದ್ಧ ದೂರು ನೀಡಿದ್ದರು. ಶಿಕ್ಷಕರು ಶಾಲಾ ಸಮಯದಲ್ಲಿ ಮದ್ಯಪಾನ ಮಾಡುತ್ತಿದ್ದು ಶಾಲೆಯ ವಾತಾವರಣ ಹಾಳಾಗಲು ಕಾರಣರಾಗಿದ್ದಾರೆಂದು ಹೇಳಿದ್ದರು.
ಶಿಕ್ಷಕನ ವರ್ತನೆಯಿಂದ ವಿಚಲಿತರಾದ ವಿದ್ಯಾರ್ಥಿಗಳು ಅನಾಮಧೇಯರಾಗಿ ಅಧಿಕಾರಿಗಳಿಗೆ ವಿಷಯ ತಿಳಿಸಿ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ಶಾಲೆಯಿಂದ ತೆಗೆದುಹಾಕುವಂತೆ ವಿನಂತಿಸಿದರು.
ದೂರುಗಳ ನಂತರ ಜಿಲ್ಲಾ ಶಿಕ್ಷಣಾಧಿಕಾರಿ (ಡಿಇಒ) ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಈ ವಿಷಯದ ಬಗ್ಗೆ ತನಿಖೆ ನಡೆಸಲು ಶಾಲೆಗೆ ಭೇಟಿ ನೀಡಿದರು. ಆದರೆ ಅಧಿಕಾರಿಗಳು ಬರುವಷ್ಟರಲ್ಲಿ ಜಿತೇಂದರ್ ಸಿಂಗ್ ಶಾಲೆಯಿಂದ ಪರಾರಿಯಾಗಿದ್ದು ಅವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದರೂ ಅವರ ಫೋನ್ ಸ್ವಿಚ್ ಆಫ್ ಆಗಿತ್ತು.
ನಂತರ ಅಧಿಕಾರಿಗಳು ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯ ಬಗ್ಗೆ ಅರಿತರು. ಶಿಕ್ಷಕ ಕಳೆದ ಆರು ವರ್ಷಗಳಿಂದ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು ಮದ್ಯಪಾನ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಇದು ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಿದೆ ಎಂದು ತಿಳಿದುಕೊಂಡು ಕ್ರಮಕ್ಕೆ ಮುಂದಾಗಿದ್ದಾರೆ.