ಮಧ್ಯಪ್ರದೇಶದ ಸದರ್ ಬಜಾರ್ ಪ್ರದೇಶದಲ್ಲಿ 25 ವರ್ಷದ ವ್ಯಕ್ತಿಯೊಬ್ಬ ತನ್ನ ಮೂರನೇ ವಿವಾಹ ವಾರ್ಷಿಕೋತ್ಸವದಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಗ್ಗೆ ತಾಯಿ ಆತನ ಕೋಣೆಗೆ ಹೋಗಿ ನೋಡಿದಾಗ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಮೃತ ಕಮಲ್, ಜತ್ವಾ ಬ್ರಹ್ಮಾ ಬಾಗ್ ಕಾಲೋನಿ ನಿವಾಸಿ. ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗದ ಕಾರಣ ಸಾವಿನ ಕಾರಣ ತಿಳಿದುಬಂದಿಲ್ಲ.
ಆದರೆ, ಕುಟುಂಬಸ್ಥರು ಪತ್ನಿ, ಅತ್ತೆ ಮತ್ತು ಮಾವ ತಮ್ಮ ಕುಟುಂಬದೊಂದಿಗೆ ಇರುವಂತೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಮೃತ ವ್ಯಕ್ತಿಯ ಹೆಂಡತಿ ಅವನಿಂದ ದೂರವಾಗಿ ತನ್ನ ತಂದೆ – ತಾಯಿಯ ಮನೆಯಲ್ಲಿ ಇದ್ದಳು ಎನ್ನಲಾಗಿದೆ.
ಮೃತ ವ್ಯಕ್ತಿ ಫ್ಯಾಬ್ರಿಕೇಶನ್ ಕೆಲಸಗಾರನಾಗಿದ್ದು, ಮಾಧ್ಯಮಗಳ ಜೊತೆ ಮಾತನಾಡಿರುವ ಸಹೋದರ ಗಗನ್, “ಕಮಲ್ ಅವರ ಪತ್ನಿ, ಅತ್ತೆ ಮತ್ತು ಮಾವ ತನ್ನ ಕುಟುಂಬವನ್ನು ತೊರೆದು ಹೆಂಡತಿಯೊಂದಿಗೆ ಪ್ರತ್ಯೇಕವಾಗಿ ಇರುವಂತೆ ಒತ್ತಡ ಹೇರುತ್ತಿದ್ದರು. ಇದೇ ವಿಚಾರವಾಗಿ ಕಳೆದ ಆರು ತಿಂಗಳಿನಿಂದ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು” ಎಂದು ಆರೋಪಿಸಿದ್ದಾರೆ.
ಇದೇ ವಿಷಯಕ್ಕೆ ದಂಪತಿಗಳ ನಡುವೆ ಜಗಳ ನಡೆದಿದ್ದು, ಹೆಂಡತಿ ತನ್ನ ಪೋಷಕರ ಮನೆಯಲ್ಲಿ ವಾಸಿಸುತ್ತಿದ್ದಳು ಮತ್ತು ತನ್ನ ಅತ್ತೆಯ ಮನೆಗೆ ಮರಳಲು ನಿರಾಕರಿಸಿದ್ದಳು. ಕೆಲವು ದಿನಗಳ ಹಿಂದೆ ಆಕೆಯನ್ನು ಕರೆತರಲು ಹೋದಾಗ ಪತ್ನಿಯ ಮನೆಯವರು ಆತನನ್ನು ನಿಂದಿಸಿದ್ದು, ಇದೇ ಕಾರಣಕ್ಕೆ ಸಾವಿಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.