ಪತಿ ಮೇಲೆ ಹುಲಿ ದಾಳಿ ಮಾಡಿದನ್ನು ಕಂಡ ಮಹಿಳೆ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಹುಲಿಯೊಂದಿಗೆ ಹೋರಾಡಿ, ಪತಿಯ ಪ್ರಾನ ಉಳಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಮಹಿಳೆಯ ಸಾಹಸ, ಧೈರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ತೆಲಂಗಾಣದ ಆಸಿಫಾಬಾದ್ ನ ಸಿರ್ಪುರ (ಟಿ) ಮಂಡಲದ ದುಬ್ಬಗುಡ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಸುಜಾತಾ ಎಂಬ ರೈತ ಮಹಿಳೆ ಹುಲಿಯೊಂದಿಗೆ ಹೋರಾಡಿ ತನ್ನ ಪತಿಯ ಜೀವ ಉಳಿಸಿದ್ದಾರೆ. ಸುಜಾತಾ ತಮ್ಮ ಹೊಲದಲ್ಲಿ ಹತ್ತಿ ಬಿಡುಸುತ್ತಿದ್ದರು. ಈ ವೇಳೆ ಪತಿ ಸುರೇಶ್ ಎತ್ತಿನಗಾಡಿಯೊಂದಿಗೆ ಹೊಲಕ್ಕೆ ಬರುತ್ತಿದ್ದರು. ಅಲ್ಲಿಯೇ ಪೊದೆಯಲ್ಲಿ ಅವಿತು ಕುಳಿತಿದ್ದ ಹುಲಿಯೊಂದು ಹೊಲೆಕ್ಕೆ ಬರುತ್ತಿದ್ದ ಸುರೇಶ್ ಮೇಲೆ ಎಗರಿದೆ. ಸುರೇಶ್ ಕೂಗಿಕೊಳ್ಳುತ್ತಿದ್ದಂತೆ ಪತ್ನಿ ಸುಜಾತಾ ಓಡಿಬಂದಿದ್ದು, ಪಕ್ಕದಲ್ಲಿದ್ದ ಕಲ್ಲು, ಕೋಲಿನಿಂದ ಹೊಡೆದಿದ್ದಾಳೆ. ಜೋರಾಗಿ ಸುಜಾತಾ ಕಿರುಚಿಕೊಳ್ಳುತ್ತಾ ಹುಲಿಯನ್ನು ಹಿಮ್ಮಟ್ಟೆಸಿದ್ದಾಳೆ.
ಹುಲಿ ಸುರೇಶ್ ಅವರ ಕತ್ತು, ಎದೆಯ ಭಾಗದಲ್ಲಿ ಪರಚಿದ್ದು, ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಸ್ಥಳೀಯ ರೈತರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ವೇಳೆ ಮಾತನಡಿರುವ ಮಹಿಳೆ ಸುಜಾತಾ, ಹುಲಿ ದಾಳಿ ಮಾಡಿದಾಗ ನನಗೆ ನನ್ನ ಪತಿ ಪ್ರಾಣ ಉಳಿಸುವುದಷ್ಟೇ ಯೋಚನೆಯಾಗಿತ್ತು. ನಾನು ಸ್ವಲ್ಪ ಹಿಂಜರಿದಿದ್ದರೂ ಪತಿಯನ್ನು ಕಳೆದುಕೊಳ್ಳುತ್ತಿದ್ದೆ. ಅರೆಕ್ಷಣ ಯೋಚಿಸದೇ ಅವರನ್ನು ರಕ್ಷಿಸಿಕೊಳ್ಳಲು ಹೋರಾಡಿದ್ದಾಗಿ ತಿಳಿಸಿದ್ದಾರೆ. ಮಹಿಳೆಯ ಧೈರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.