ಬೆಂಗಳೂರು: ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡು ಮೂವರು ಯುವಕರು ಗಾಯಗೊಂಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ನಡೆದಿದೆ.
ಸಿಲಿಂಡರ್ ಸ್ಫೋಟದ ರಭಸಕ್ಕೆ ಅಕ್ಕ-ಪಕ್ಕದ ಮನೆಗಳಿಗೂ ಹಾನಿಯಾಗಿದೆ. ರಮೇಶ್ ಎಂಬುವವರ ಮನೆಯಲ್ಲಿ ಅಸ್ಸಾಂ ಮೂಲದ ನಾಲ್ವರು ಯುವಕರು ಬಾಡಿಗೆಗೆ ವಾಸವಾಗಿದ್ದರು. ಬೆಳಿಗ್ಗೆ ಇದ್ದಕ್ಕಿದ್ದಂತೆ ಸಿಲಿಂಡರ್ ಸ್ಫೋಟಗೊಂಡಿದೆ.
ಮೂವರು ಯುವಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬಿದನ್ ದಾಸ್, ದಯಾಲ್ ತಾಂತಿ, ಗುಲಾಬ್ ಕರ್ಮಾಕರು ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗ್ಯಾಸ್ ಸರಿಯಾಗಿ ಆಫ್ ಮಾಡದೇ ಹಾಗೇ ಬಿಟ್ಟಿದ್ದರು. ಇಂದು ಬೆಳಿಗ್ಗೆ ಗ್ಯಾಸ್ ಆನ್ ಮಾಡುತ್ತಿದ್ದಂತೆ ಗ್ಯಾಸ್ ಸೋರಿಕೆಯಾಗಿ ಸ್ಫೋಟಗೊಂಡಿದೆ ಎನ್ನಲಾಗಿದೆ.
ಸೂರ್ಯನಗರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.