ಒಡಿಶಾದ ಬೆರ್ಹಾಂಪುರ್ ಜಿಲ್ಲೆಯ ಗ್ರಾಮವೊಂದರಲ್ಲಿ ನವೆಂಬರ್ 24ರಂದು ಘಟನೆ ನಡೆದಿದ್ದು, ಅಲ್ಲಿನ ಕಂಜಿಯಾನಲ ಯಾತ್ರೆಯ ವೇಳೆ ರಾಮಾಯಣ ನಾಟಕವನ್ನು ಕಲಾವಿದರು ಪ್ರದರ್ಶಿಸುತ್ತಿದ್ದರು ಎನ್ನಲಾಗಿದೆ.
ಹಿಂಜಿಲಿ ಬ್ಲಾಕ್ನ ರಾಲಾಬ್ ಗ್ರಾಮದಲ್ಲಿ ಅಭಿನಯಿಸಿದ ನಾಟಕದ ಕಲಾವಿದರು ವೇದಿಕೆಯ ಮೇಲೆ ಜೀವಂತ ಹಂದಿಯನ್ನು ಸೀಳಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ. ನಾಟಕದ ದೃಶ್ಯಾವಳಿಗಳನ್ನು ನೈಜವೆಂದು ತೋರಲು, ರಾಕ್ಷಸನ ಪಾತ್ರವನ್ನು ನಿರ್ವಹಿಸುವ ಐವರು ನಟರು ಜೀವಂತ ಹಂದಿಯನ್ನು ಚಾವಣಿಗೆ ಕಟ್ಟಿ ಚಾಕುವಿನಿಂದ ಹೊಟ್ಟೆಯನ್ನು ಸೀಳಿದ್ದಾರೆ. ಅಷ್ಟೇ ಅಲ್ಲ, ಅವರಲ್ಲಿ ಒಬ್ಬರು ನಂತರ ಪ್ರಾಣಿಯ ಕರುಳಿನ ಒಂದು ಭಾಗವನ್ನು ಅಗಿಯುತ್ತಾರೆ.
ಇದನ್ನು ಹೊರತುಪಡಿಸಿ, ಇಬ್ಬರು ನಟರು ವಾನರರ ವೇಷಭೂಷಣ ಧರಿಸಿ ಎರಡು ಜೀವಂತ ವಿಷಕಾರಿ ಹಾವುಗಳೊಂದಿಗೆ ಆಡಿದ್ದಾರೆ. ಹಿಂಜಿಲಿಕಟ್ನ ಬಜರಂಗಿ ಗ್ರೂಪ್ ಪ್ರಾಯೋಜಿಸಿದ ಈ ಸಾಹಸವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಬೆರ್ಹಾಂಪುರದ ಡಿಎಫ್ಒ ಸನ್ನಿ ಖೋಕರ್ ಪ್ರಾಣಿ ಹಿಂಸೆಯನ್ನು ಒಳಗೊಂಡಿರುವುದರಿಂದ ತನಿಖೆಗೆ ಆದೇಶಿಸಿದ್ದಾರೆ. ಏತನ್ಮಧ್ಯೆ, ನಾಟಕದ ಸಂಘಟಕನನ್ನು ಭಾನುವಾರ ಬಂಧಿಸಲಾಗಿದೆ ಎಂದು ಕಲೆಕ್ಟರ್ ದಿಬ್ಯಜ್ಯೋತಿ ಪರಿದಾ ಹೇಳಿದ್ದಾರೆ.