ಬೆಂಗಳೂರು: ಫೆಬ್ರವರಿಯಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ಸಿದ್ಧತೆ ನಡೆಸಲಾಗಿದೆ. ಸಂಪುಟದಲ್ಲಿ ಈ ಬಗ್ಗೆ ಚರ್ಚೆಯಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಶೀಘ್ರದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಯಲಿದೆ. ಸಚಿವ ಸಂಪುಟದಲ್ಲಿ ಬಗ್ಗೆ ಚರ್ಚೆಯಾಗಿದ್ದು, ಫೆಬ್ರವರಿ ವೇಳೆಗೆ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಪಂಚಾಯತಿ ಕ್ಷೇತ್ರಗಳ ಮರು ವಿಂಗಡಣೆ, ಮೀಸಲಾತಿ, ಚುನಾವಣೆ ನಡೆಸಲು ರಾಜ್ಯ ಚುನಾವಣೆ ಆಯೋಗಕ್ಕೆ ಇದ್ದ ಅಧಿಕಾರವನ್ನು ಹಿಂಪಡೆದ ಬಗ್ಗೆ ಹೈಕೋರ್ಟ್ ನಲ್ಲಿ ಪ್ರಶ್ನಿಸಿರುವುದು ಸೇರಿ ವಿವಿಧ ಕಾರಣಗಳಿಂದ ಚುನಾವಣೆ ಮುಂದಕ್ಕೆ ಹೋಗುತ್ತಿತ್ತು. ಇದೀಗ ಚುನಾವಣೆ ನಡೆಸುವ ಬಗ್ಗೆ ಡಿಸಿಎಂ ಮೊದಲ ಬಾರಿಗೆ ಖಚಿತವಾಗಿ ಹೇಳಿದ್ದಾರೆ.
2021ರ ಏಪ್ರಿಲ್ ಮೇ ತಿಂಗಳಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಸದಸ್ಯರ ಅವಧಿ ಮುಗಿದಿದ್ದು, ಮೂರುವರೆ ವರ್ಷ ಕಳೆದರೂ ಚುನಾವಣೆ ಪ್ರಕ್ರಿಯೆ ಆರಂಭವಾಗಿಲ್ಲ. ಮುಂದಿನ ಫೆಬ್ರವರಿಯಲ್ಲಿ ಚುನಾವಣೆ ನಡೆಸುವ ಬಗ್ಗೆ ಡಿಸಿಎಂ ಸುಳಿವು ನೀಡಿದ್ದು, ಫೆಬ್ರವರಿ ಅಥವಾ ಮಾರ್ಚ್ ವೇಳೆಗೆ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆ ನಡೆಯುವ ಸಾಧ್ಯತೆ ಇದೆ.