ರಾಜಸ್ಥಾನದಲ್ಲಿ ನಡೆದಿರುವ ಘಟನೆಯೊಂದು ಪೊಲೀಸ್ ಇಲಾಖೆ ತಲೆತಗ್ಗಿಸುವಂತೆ ಮಾಡಿದೆ. ಸರ್ಕಾರಿ ಉದ್ಯೋಗ, ವರ್ಗಾವಣೆ ಹೆಸರಿನಲ್ಲಿ ವಂಚನೆ ಮಾಡಿರುವ ಪ್ರಕರಣಗಳು ಸಾಕಷ್ಟು ಕೇಳಿ ಬರುತ್ತಿರುವ ಮಧ್ಯೆ ಅಜ್ಮೀರ್ ಜಿಲ್ಲೆಯಲ್ಲಿ ವಿಶಿಷ್ಟ ಪ್ರಕರಣವೊಂದು ಬೆಳಕಿಗೆ ಬಂದಿದ್ದು ಇಲ್ಲಿ ಮಹಿಳಾ ಪೇದೆಯೊಬ್ಬರನ್ನು ವರ್ಗಾವಣೆ ಮಾಡುವ ಹೆಸರಿನಲ್ಲಿ ಲಕ್ಷ ಲಕ್ಷ ರೂಪಾಯಿ ವಂಚಿಸಿದ ಇಬ್ಬರು ಪೊಲೀಸರ ವಿರುದ್ಧ ಪ್ರಕರಣ ದಾಖಲಾಗಿದೆ.
ಅಜ್ಮೀರ್‌ನಿಂದ ಜೈಪುರಕ್ಕೆ ವರ್ಗಾವಣೆಯಾಗಲು ಬಯಸಿದ್ದ ಮಹಿಳಾ ಪೇದೆ ಇದಕ್ಕಾಗಿ ಲಕ್ಷಾಂತರ ರೂಪಾಯಿ ಹಣ ನೀಡಿದ್ದರು. ಮಹಿಳಾ ಪೇದೆಯ ಸಹೋದ್ಯೋಗಿ ಮತ್ತು ಅವರ ಪೊಲೀಸ್ ಸ್ನೇಹಿತ ಇಬ್ಬರೂ ಆಕೆಯಿಂದ ಹಣ ಪಡೆದು ನಂತರ ಸಬೂಬು ಹೇಳುತ್ತಿದ್ದರು. ಈ ಕುರಿತು ಮಹಿಳೆ ದೂರು ನೀಡಿದ ನಂತರ ಪೊಲೀಸರು ಇಬ್ಬರನ್ನೂ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ವಿಚಾರಣೆ ವೇಳೆ ಇಬ್ಬರೂ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಇಬ್ಬರನ್ನೂ 15 ದಿನಗಳ ಕಾಲ ಜೈಲಿಗೆ ಕಳುಹಿಸಲಾಗಿತ್ತಾದರೂ ಇಲ್ಲಿಯವರೆಗೆ ಅವರು ಪಡೆದ ಹಣ ವಾಪಸ್ ನೀಡಿಲ್ಲ. ಪೊಲೀಸರು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ.
ಪೊಲೀಸರ ಪ್ರಕಾರ ಇಬ್ಬರೂ ಕಾನ್‌ಸ್ಟೆಬಲ್‌ಗಳು ತಮಗೆ ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕವಿದೆ ಎಂದು ಹೇಳಿ ಮಹಿಳಾ ಕಾನ್‌ಸ್ಟೇಬಲ್ ನಿಂದ 16 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ.
ರಾಜಸ್ಥಾನದಲ್ಲಿ, ವರ್ಗಾವಣೆ ಮತ್ತು ಸರ್ಕಾರಿ ನೌಕರಿ ಪಡೆಯುವ ಹೆಸರಿನಲ್ಲಿ ಹಣ ಪಡೆದಿರುವ ಅನೇಕ ಪ್ರಕರಣಗಳಿದ್ದರೂ ಪೊಲೀಸರ ವಿರುದ್ಧ ದಾಖಲಾದ ಮೊದಲ ಪ್ರಕರಣ ಇದಾಗಿದೆ.