ಬೆಂಗಳೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ವಿತರಿಸಿದ ಶೂನ್ಯ ಬಡ್ಡಿದರ ಸಾಲದ ಮೇಲಿನ ಸರ್ಕಾರದ ಸಹಾಯಧನವನ್ನು ಡಿಸಿಸಿ ಬ್ಯಾಂಕುಗಳಿಗೆ ಬಿಡುಗಡೆ ಮಾಡಲಾಗಿದೆ.
ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ಅಪೆಕ್ಸ್ ಬ್ಯಾಂಕ್, ಹಿರಿಯ ಸಹಕಾರಿ ಅಧಿಕಾರಿಗಳ ಸಭೆ ನಡೆಸಿದ್ದು, ಸಹಾಯಧನ ಬಿಡುಗಡೆಗೆ ಮನವಿ ಮಾಡಲಾಗಿತ್ತು. ಅಲ್ಲದೇ ಹಿಂದಿನ ಸಾಲ ಮನ್ನಾ ಬಾಕಿ ಬಿಡುಗಡೆಗೆ ಕೋರಲಾಗಿತ್ತು.
ಕಳೆದ ಎರಡು ವರ್ಷಗಳಿಂದ ರೈತರ ಶೂನ್ಯ ಬಡ್ಡಿ ಸಾಲದ ಮೇಲಿನ ಸಹಾಯಧನ ಬಿಡುಗಡೆಯಾಗಿಲ್ಲ. ಇದರಿಂದ ಸಹಕಾರಿ ಬ್ಯಾಂಕ್ ಗಳ ಮೇಲೆ ಪರಿಣಾಮ ಉಂಟಾಗಿದೆ ಎಂದು ತಿಳಿಸಿ ಸಹಾಯಧನ ಬಿಡುಗಡೆಗೆ ಸಿಎಂಗೆ ಮನವಿ ಮಾಡಿದ್ದು, ಅಂತೆಯೇ ಸಹಾಯಧನ ಬಿಡುಗಡೆ ಕ್ರಮ ಕೈಗೊಳ್ಳಲಾಗಿದ್ದು, ಡಿಸೆಂಬರ್ 2ರ ಸೋಮವಾರ ಎಲ್ಲಾ ಬ್ಯಾಂಕುಗಳಿಗೆ ಸಹಾಯಧನ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.