ಬೆಳಗಾವಿ: ನಿಮ್ಮ ಹೊಂದಾಣಿಕೆ ರಾಜಕಾರಣದಿಂದಾಗಿ ಇಂದು ಬಿಜೆಪಿಗೆ ಈ ಸ್ಥಿತಿ ಬಂದಿದೆ. ವಿಪಕ್ಷಕ್ಕೆ ಬಂದಿದ್ದೇವೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಕಿಡಿಕಾರಿದ್ದಾರೆ.
ಬೆಳಗಾವಿಯ ಗಾಂಧಿ ಭವನದಲ್ಲಿ ವಕ್ಫ್ ವಿರುದ್ಧ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅರವಿಂದ ಲಿಂಬಾವಳಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಿ ಎಂದು ನಿಮ್ಮನ್ನು ಅಧ್ಯಕ್ಷರನ್ನಾಗಿ ಮಾಡಿಲ್ಲ ಎಚ್ಚರವಿರಲಿ ಎಂದು ಗುಡುಗಿದ್ದಾರೆ.
ಬೀದರ್ ನಿಂದ ವಕ್ಫ್ ಹೋರಾಟ ಮಾಡುತ್ತಿದ್ದೇವೆ. ನಮಗೆ ಕೆಲವರು ಬೆಂಗಳೂರಲ್ಲಿ ಕುಳಿತು ಪಕ್ಷ ವಿರೋಧಿ ಕೆಲಸ ಎನ್ನುತ್ತಿದ್ದಾರೆ. ನಾವು ಪಕ್ಷ ವಿರೋಧ ಕೆಲಸ ಮಾಡುತ್ತಿದ್ದೇವಾ? ನಾವು ಮಡುತ್ತಿರುವುದು ಜನಪರ ಕೆಲಸ. ರೈತರ ಪರ ಹೋರಾಟ. ನೀವೇನು ಮಾಡುತ್ತಿದೀರಿ? ಎಂದು ಪ್ರಶ್ನಿಸಿದರು.
ಜನರ ಪರವಾಗಿ ನಾವು ಧ್ವನಿ ಎತ್ತುತ್ತಿದ್ದರೆ ನಮ್ಮನ್ನು ಜನವಿರೋಧಿ ಎನ್ನುತ್ತಿದ್ದೀರಿ. ಪಕ್ಷ ಕಟ್ಟಿದವರು ನಾವು. ಯತ್ನಾಳ್ ರನ್ನು ಉಚ್ಛಾಟಿಸುವ ಮಾತನಾಡುತ್ತಿದ್ದೀರಿ. ಉಪಚುನಾವಣೆ ಸೋತ ಬಳಿಕ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಅಂತಾ ಹೇಳುತ್ತಾರೆ. ಚುನಾವಣೆ ರಾಜಕೀಯ ಪಕ್ಷಕ್ಕೆ ಗಂಭೀರವಲ್ಲ ಅಂದರೆ ಹೇಗೆ? ಉಪಚುನಾವಣೆ ಮುಗಿದು ಬಹಳ ದಿನವಾಯಿತು. ಇನ್ನೂ ವಕ್ಫ್ ವಿರುದ್ಧ ಹೋರಾಟಕ್ಕೆ ಇಳಿದಿಲ್ಲ. ನಾವು ಹೋರಾಟ ಮಾಡಿದರೆ ಹಾದಿ ಬೀದಿಯಲ್ಲಿ ನಿಂತು ಮಾತನಾಡ್ತಾರೆ ಅಂತಾರೆ. ಬೀದಿಯಲ್ಲಿ ನಿಂತು ಮಾತನಾಡುತ್ತಿರುವುದು ಯಾರು? ನೀವು ಬೆಂಗಳೂರಿನಲ್ಲಿ ಕುಳಿತು ಮಾತನಾಡುತ್ತಿದ್ದೀರಿ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.