ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ(ಬಿಸಿಸಿಐ) ಮಾಜಿ ಗೌರವ ಕಾರ್ಯದರ್ಶಿ ಜಯ್ ಶಾ ಅವರು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ(ಐಸಿಸಿ) ಅಧ್ಯಕ್ಷರಾಗಿ ತಮ್ಮ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಅಪೆಕ್ಸ್ ಕ್ರಿಕೆಟ್ ಆಡಳಿತ ಮಂಡಳಿಯ ಹೊಸ ಅಧ್ಯಕ್ಷರಾಗಿ ತಮ್ಮ ಮೊದಲ ಹೇಳಿಕೆಯಲ್ಲಿ, ಮಹಿಳಾ ಆಟದ ಬೆಳವಣಿಗೆ ಮತ್ತು ಬೇಸಿಗೆ ಒಲಿಂಪಿಕ್ಸ್ ನಲ್ಲಿ ಕ್ರೀಡೆಯ ಮರುಪರಿಚಯಕ್ಕೆ ಒತ್ತು ನೀಡಿದ್ದಾರೆ.
ಐಸಿಸಿ ನಿರ್ದೇಶಕರು ಮತ್ತು ಸದಸ್ಯ ಮಂಡಳಿಗಳ ಬೆಂಬಲ ಮತ್ತು ನಂಬಿಕೆಗೆ ನಾನು ಕೃತಜ್ಞನಾಗಿದ್ದೇನೆ ಎಂದು ಶಾ ಹೇಳಿದ್ದಾರೆ.
ಕ್ರಿಕೆಟ್ ಜಾಗತಿಕವಾಗಿ ಅಪಾರ ಸಾಮರ್ಥ್ಯವನ್ನು ಹೊಂದಿದೆ, ಈ ಅವಕಾಶಗಳನ್ನು ಬಳಸಿಕೊಂಡು ಕ್ರೀಡೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ICC ತಂಡ ಮತ್ತು ಸದಸ್ಯ ರಾಷ್ಟ್ರಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮುಂದಿನ ಆವೃತ್ತಿಯ ಆತಿಥ್ಯಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದವನ್ನು ಪರಿಹರಿಸುವುದು ಶಾಗೆ ದೊಡ್ಡ ಸವಾಲಾಗಿದೆ. ಪಾಕಿಸ್ತಾನಕ್ಕೆ ಭೇಟಿ ನೀಡಲು ಬಿಸಿಸಿಐ ನಿರಾಕರಿಸಿದೆ. ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಲು ಐಸಿಸಿ ಪಿಸಿಬಿಗೆ ಸಲಹೆ ನೀಡಿದೆ. ಚೆಂಡು ಈಗ ಪಿಸಿಬಿಯ ಅಂಗಳದಲ್ಲಿದೆ. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಹೈಬ್ರಿಡ್ ಮಾದರಿಯನ್ನು ಒಪ್ಪಿಕೊಳ್ಳುವ ಸಾಧ್ಯತೆಯಿದೆ.