ತನ್ನನ್ನು ತಾನು ʼಡಾನ್ʼ ಎಂದು ಕರೆದುಕೊಳ್ಳುತ್ತಿದ್ದ ಇಬ್ಬರು ಪಾತಕಿಗಳಿಗೆ ಮಧ್ಯಪ್ರದೇಶದ ಇಂದೋರ್ ಪೊಲೀಸರು ಟ್ರೋಲ್ ಮಾಡಿದ್ದಾರೆ. ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳ ಸುಳಿವು ನೀಡಿದವರಿಗೆ ಕೇವಲ 1 ರೂಪಾಯಿ ಬಹುಮಾನ ನೀಡುವುದಾಗಿ ಪೊಲೀಸರು ಶುಕ್ರವಾರ ಆದೇಶ ಹೊರಡಿಸುವ ಮೂಲಕ ಲೇವಡಿ ಮಾಡಿದ್ದಾರೆ.
ಪೊಲೀಸರು ಹೊರಡಿಸಿರುವ ಪ್ರಕಟಣೆಯಲ್ಲಿ ಇಬ್ಬರು ರೌಡಿ ಶೀಟರ್‌ಗಳಾದ ತಬ್ರೇಜ್ ಮತ್ತು ಬಿಟ್ಟು ಅಲಿಯಾಸ್ ಸೌರಭ್ ಗೌಡ್ ಅವರ ಛಾಯಾಚಿತ್ರಗಳಿದ್ದು, ನೋಟಿಸ್‌ನಲ್ಲಿ, ಇಂದೋರ್ ಪೊಲೀಸರು ತಲೆಮರೆಸಿಕೊಂಡಿರುವ ಇಬ್ಬರು ಕ್ರಿಮಿನಲ್‌ಗಳಾದ ತಬ್ರೇಜ್ ಮತ್ತು ಬಿಟ್ಟು ಅವರ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ. ಇವರ ಬಂಧನಕ್ಕೆ ಸುಳಿವು ನೀಡಿದವರಿಗೆ 1 ರೂಪಾಯಿ (ತಲಾ 50 ಪೈಸೆ) ಬಹುಮಾನ ನೀಡುವುದಾಗಿ ಘೋಷಿಸಲಾಗಿದೆ. ಸಾರ್ವಜನಿಕರು ಇವರಿರುವ ಸ್ಥಳದ ಬಗ್ಗೆ ಯಾವುದೇ ಮಾಹಿತಿಯನ್ನು ಒದಗಿಸಲು ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.
ಡಿಸಿಪಿ (ವಲಯ-1) ವಿನೋದ್ ಕುಮಾರ್ ಮೀನಾ ಈ ಕುರಿತು ಮಾಹಿತಿ ನೀಡಿದ್ದು, ತಬ್ರೇಜ್ ಅಲಿ ಸದರ್ ಬಜಾರ್ ಪ್ರದೇಶದ ನಿವಾಸಿಯಾಗಿದ್ದು ಚೂರಿ ಇರಿತದ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ ಮತ್ತೊಬ್ಬ ಮಲ್ಹಾರಗಂಜ್ ಪ್ರದೇಶದ ನಿವಾಸಿ ಬಿಟ್ಟು ಅಲಿಯಾಸ್ ಸೌರಭ್ ಗೌಡ್ ಕೊಲೆ ಆರೋಪಿ ಎಂದು ತಿಳಿಸಿದ್ದಾರೆ.
ಮಲ್ಹಾರಗಂಜ್ ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ಕೊಲೆ ಪ್ರಕರಣದ ಸಾಕ್ಷಿಗೆ ಬಿಟ್ಟು, ಬೆದರಿಕೆ ಹಾಕಿದ್ದ. ಇವರಿಬ್ಬರು ತಮ್ಮನ್ನು ‘ಡಾನ್’ ಎಂದು ಪರಿಗಣಿಸುತ್ತಿದ್ದು, ಹೀಗಾಗಿ ದೊಡ್ಡ ಬಹುಮಾನವನ್ನು ನಿರೀಕ್ಷಿಸುತ್ತಿದ್ದರು. ಈ ರೀತಿಯ ಹಗಲುಗನಸು ಕಾಣುತ್ತಿದ್ದ ಗೂಂಡಾಗಳ ನಿರೀಕ್ಷೆಯನ್ನು ಹುಸಿಗೊಳಿಸಲು ಇಂದೋರ್ ಪೋಲೀಸರು ಇಂತಹ ಕ್ರಮಕ್ಕೆ ಮುಂದಾದರು.
ಆರೋಪಿಗಳ ವಿರುದ್ಧ ಕೊಲೆ ಸೇರಿದಂತೆ ಗಂಭೀರ ಆರೋಪಗಳನ್ನು ದಾಖಲಿಸಲಾಗಿದೆ. ಆದ್ದರಿಂದ, ಇಂದೋರ್ ಪೊಲೀಸರು ನೋಟಿಸ್‌ನಲ್ಲಿ ಪ್ರಕಟಣೆಯಲ್ಲಿ ಇರುವ ವ್ಯಕ್ತಿಗಳನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಸಾರ್ವಜನಿಕರ ಸಹಕಾರವನ್ನು ಕೋರಿದ್ದಾರೆ. ಶೀಘ್ರದಲ್ಲೇ ಇಬ್ಬರನ್ನು ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.