ಬೆಂಗಳೂರು: ಕೆ.ಎಸ್.ಆರ್.ಪಿ.ಯಲ್ಲಿ ಅಧಿಕಾರಿಗಳು, ಸಿಬ್ಬಂದಿ ನಿವೃತ್ತಿಯಾದ ದಿನವೇ ಆ ಖಾಲಿ ಹುದ್ದೆಗಳನ್ನು ಭರ್ತಿಗೊಳಿಸಲು ಮುಂಬಡ್ತಿ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ಎಡಿಜಿಪಿ ಉಮೇಶ್ ಕುಮಾರ್ ಮುಂಬಡ್ತಿ ವ್ಯವಸ್ಥೆಯನ್ನು ಜಾರಿಗೊಳಿಸಿದ್ದಾರೆ. ತಿಂಗಳಾಂತ್ಯಕ್ಕೆ ಸಿಬ್ಬಂದಿ ನಿವೃತ್ತಿಯಿಂದ ತೆರವಾಗುವ ಹುದ್ದೆಗಳಿಗೆ ಸೇವಾ ಹಿರಿತನದ ಮೇರೆಗೆ ಮತ್ತೊಬ್ಬರಿಗೆ ಮುಂಬಡ್ತಿ ನೀಡಲಾಗುವುದು. ನಾಲ್ಕು ತಿಂಗಳಿನಿಂದ ಈ ವ್ಯವಸ್ಥೆ ಜಾರಿಯಲ್ಲಿದೆ.
ಇದುವರೆಗೆ ಪಿಸಿಯಿಂದ ಹೆಚ್.ಸಿ. 224, ಹೆಚ್.ಸಿ.ಯಿಂದ ಎಎಸ್ಐ 184, ಎಎಸ್ಐ ನಿಂದ ಪಿಎಸ್ಐ 64, ಪಿಎಸ್ಐ ನಿಂದ ಪಿಐ 16 ಹೀಗೆ ಒಟ್ಟು 488 ಸಿಬ್ಬಂದಿ ಮುಂಬಡ್ತಿ ಪಡೆದುಕೊಂಡಿದ್ದಾರೆ. ವಿಳಂಬವಿಲ್ಲದೆ ಮೂರು ದಶಕಗಳು ಇಲಾಖೆಯಲ್ಲಿ ದುಡಿದ ಅರ್ಹರಿಗೆ ಮುಂಬಡ್ತಿ ಭಾಗ್ಯ ದೊರೆತಂತಾಗಿದೆ.
ಕೆ.ಎಸ್.ಆರ್.ಪಿ.ಯಲ್ಲಿ ಹೊಸದಾಗಿ 10 ಡೆಪ್ಯೂಟಿ ಕಮಾಂಡೆಂಟ್ ಹುದ್ದೆಗಳನ್ನು ಸೂಚಿಸುವ ಪ್ರಸ್ತಾಪಕ್ಕೆ ಸರ್ಕಾರ ಸಮ್ಮತಿಸಿದೆ. ಹುದ್ದೆಗಳಿಗೆ ಸೇವಾ ಹಿರಿತನದ ಮೇಲೆ ಎಡಿಜಿಪಿ ಉಮೇಶ್ ಕುಮಾರ್ ನೇಮಿಸಿದ್ದಾರೆ. ಇನ್ನು ಕೆಎಸ್ಆರ್ಪಿ ಯಲ್ಲಿ ಹೊಸದಾಗಿ 2400 ಪೊಲೀಸ್ ಬಲವುಳ್ಳ ಎರಡು ಬೆಟಾಲಿಯನ್ ಗಳ ಆರಂಭಕ್ಕೆ ಅಧಿಕೃತವಾಗಿ ಶುಕ್ರವಾರ ಸರ್ಕಾರ ಆದೇಶಿಸಿದೆ. 2400 ಪೊಲೀಸರನ್ನು ಕೆಎಸ್ಆರ್ಪಿಗೆ ನೇಮಕ ಮಾಡಿಕೊಳ್ಳಲಾಗುವುದು.