ಹಲವು ರಾಷ್ಟ್ರಗಳಲ್ಲಿ ಅಕ್ಕಿಯೇ ಪ್ರಮುಖ ಆಹಾರ. ಬಾಸುಮತಿಯಿಂದ ಹಿಡಿದು ಬ್ಲಾಕ್ ರೈಸ್ ವರೆಗೆ ಹಲವು ಬಗೆಯ ಅಕ್ಕಿಗಳು ದೊರೆಯುತ್ತವೆ. ಅವುಗಳಲ್ಲಿ ಅತ್ಯಂತ ಆರೋಗ್ಯಕರ ಅಕ್ಕಿ ಅಂದ್ರೆ ಬ್ರೌನ್ ರೈಸ್. ಇದೊಂದು ಸಂಸ್ಕರಿಸದ ಧಾನ್ಯ. ಇದರಲ್ಲಿ ಜೀವಾಂಕುರ ಪದರ, ಹೊಟ್ಟು ಮತ್ತು ಪಾರ್ಶ್ವ ಸಿಪ್ಪೆ ಹಾಗೇ ಇರುತ್ತದೆ.
ಇದರಲ್ಲಿ ಒಂದು ರೀತಿಯ ನಟ್ಟಿ ಫ್ಲೇವರ್ ಇರುತ್ತೆ, ಮಾಮೂಲಿ ಅನ್ನಕ್ಕಿಂತ ಸ್ವಲ್ಪ ಜಾಸ್ತಿ ಜಗಿಯಬೇಕು. ನಾವು ನಿತ್ಯ ಬಳಸುವ ಬಿಳಿ ಅಕ್ಕಿಗಿಂತ ಇದು ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಕಬ್ಬಿಣ, ಕ್ಯಾಲ್ಷಿಯಂ, ಸತು ಮತ್ತು ಇತರ ವಿಟಮಿನ್ ಗಳು ಕೂಡ ಇವೆ. ಬ್ರೌನ್ ರೈಸ್ ನ ಪ್ರಮುಖ ಪ್ರಯೋಜನಗಳು ಯಾವುದು ಅನ್ನೋದನ್ನು ನೋಡೋಣ.
ತೂಕ ಇಳಿಸಲು : ನೀವು ತೂಕ ಇಳಿಸಲು ಕಸರತ್ತು ಮಾಡ್ತಾ ಇದ್ರೆ ಬ್ರೌನ್ ರೈಸ್ ಬಳಸಲು ಆರಂಭಿಸಿ. ಯಾಕಂದ್ರೆ ಇದು ದೇಹದ ಬೊಜ್ಜನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ ನಿಮ್ಮ ದೇಹದಲ್ಲಿ ಒಳ್ಳೆ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಇದರಲ್ಲಿ ಆ್ಯಂಟಿ ಒಬೆಸಿಟಿ ಗುಣವಿದೆ ಎನ್ನುತ್ತಾರೆ ತಜ್ಞರು.
ಸಂತಾನೋತ್ಪತ್ತಿ ಮತ್ತು ನರಮಂಡಲ ವ್ಯವಸ್ಥೆಗೆ : ಬ್ರೌನ್ ರೈಸ್ ನಲ್ಲಿ ಮ್ಯಾಂಗನೀಸ್ ಅಂಶ ಅಧಿಕವಾಗಿದೆ. ದೇಹದಲ್ಲಿ ಕೊಬ್ಬಿನ ಅಂಶ ಶೇಖರಣೆಯಾಗದಂತೆ ತಡೆಯುತ್ತದೆ. ಒಂದು ಕಪ್ ಬ್ರೌನ್ ರೈಸ್ ಸೇವಿಸಿದರೆ ನಿಮಗೆ ನಿತ್ಯ ಅವಶ್ಯಕತೆ ಇರುವ ಶೇ.80 ರಷ್ಟು ಮ್ಯಾಂಗನೀಸ್ ಅಂಶ ದೊರೆಯುತ್ತದೆ. ಮ್ಯಾಂಗನೀಸ್ ಸಂತಾನೋತ್ಪತ್ತಿ ಮತ್ತು ನರಮಂಡಲ ವ್ಯವಸ್ಥೆಗೆ ಅತ್ಯಂತ ಒಳ್ಳೆಯದು.
ಬೇಡದ ಕೊಲೆಸ್ಟ್ರಾಲ್ ಇಳಿಕೆ : ಬ್ರೌನ್ ರೈಸ್ ನಿಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಬ್ರೌನ್ ರೈಸ್ ನಲ್ಲಿರುವ ಎಣ್ಣೆಯ ಅಂಶ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೊರಹಾಕಲು ಸಹಕಾರಿಯಾಗುತ್ತದೆ.
ಆ್ಯಂಟಿಒಕ್ಸಿಡೆಂಟ್ : ಬ್ರೌನ್ ರೈಸ್ ನಲ್ಲಿ ಶಕ್ತಿಯುತ ಆ್ಯಂಟಿ ಒಕ್ಸಿಡೆಂಟ್ ಅಂಶಗಳಿವೆ. ನಿಮ್ಮ ದೇಹಕ್ಕೆ ಹಾನಿಯುಂಟು ಮಾಡಬಲ್ಲ ಫ್ರೀ ರಾಡಿಕಲ್ಸ್ ಜೊತೆಗೆ ಅದು ಹೋರಾಡುತ್ತದೆ. ಆಕ್ಸಿಡೇಶನ್ ನಿಂದ ಉಂಟಾಗುವ ರೋಗಗಳನ್ನು ತಡೆಯುವ ಶಕ್ತಿ ಬ್ರೌನ್ ರೈಸ್ ಗಿದೆ.
ವಾತ ಮತ್ತು ಹೃದಯದ ಸಮಸ್ಯೆಗೆ ಪರಿಹಾರ : ಬ್ರೌನ್ ರೈಸ್ ನಲ್ಲಿ ಸೆಲೆನಿಯಂ ಅಂಶವಿದೆ. ಇದರಿಂದ ಕ್ಯಾನ್ಸರ್, ವಾತ ಮತ್ತು ಹೃದಯದ ಸಮಸ್ಯೆಗಳ ಬರದಂತೆ ತಡೆಗಟ್ಟಬಹುದು.
ಜೀರ್ಣಕ್ರಿಯೆ : ಬ್ರೌನ್ ರೈಸ್ ನಲ್ಲಿರೋ ಫೈಬರ್ ಅಂಶ ನಿಮ್ಮ ಜೀರ್ಣ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಅಜೀರ್ಣದಂತಹ ಸಮಸ್ಯೆಗಳು ಬರದಂತೆ ತಡೆಗಟ್ಟುತ್ತದೆ.
ಕ್ಯಾನ್ಸರ್ ಗೆ ಮದ್ದು : ಬ್ರೌನ್ ರೈಸ್ ನಲ್ಲಿರೋ ಫೈಬರ್ ಮತ್ತು ಆ್ಯಂಟಿಒಕ್ಸಿಡೆಂಟ್ ಗಳು ಸ್ತನ ಕ್ಯಾನ್ಸರ್, ಕೊಲೊನ್ ಕ್ಯಾನ್ಸರ್ ಮತ್ತು ಲುಕೇಮಿಯಾದಂತಹ ಖಾಯಿಲೆ ಬರದಂತೆ ತಡೆಗಟ್ಟುತ್ತವೆ. ಬ್ರೌನ್ ರೈಸ್ ನಲ್ಲಿ ಕಿಮೋಪ್ರಿವೆಂಟಿವ್ ಅಂಶಗಳಿದ್ದು, ಅವು ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆಯನ್ನು ತಡೆಗಟ್ಟುತ್ತವೆ.