ಬೆಂಗಳೂರು: ವಿಶ್ವ ಒಕ್ಕಲಿಗ ಸಮುದಾಯದ ಚಂದ್ರಶೇಖರ ಸ್ವಾಮೀಜಿ ವಿರುದ್ಧ ಎಫ್ಐಆರ್ ದಾಖಲು ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ವಿಪಕ್ಷ ನಾಯಕ ಆರ್.ಅಶೋಕ್, ಇದು ಒಕ್ಕಲಿಗ ಸ್ವಾಮೀಜಿಗಳನ್ನು ಹೆದರಿಸುವ ಕೆಲಸ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಮುಸ್ಲಿಂ ವ್ಯಕ್ತಿಯೊಬ್ಬ ದೂರು ನೀಡಿದ ಕಾರಣಕ್ಕೆ ಚಂದ್ರಶೇಖರ ಸ್ವಾಮೀಜಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಒಕ್ಕಲಿಗ ಸ್ವಾಮೀಜಿಗಳನ್ನು ಹೆದರಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಶ್ರೀಗಳಿಗೆ ಕಿರುಕುಳ ನೀಡಬೇಕು ಎಂದು ಹೀಗೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ವಾಮೀಜಿಗಳಿಗೆ ತೊಂದರೆ ಕೊಡಬೇಕು ಎಂಬ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ. ಸಿಎಂ ಸಿದ್ದರಮಾಯ್ಯನವರಿಗೆ ಹಿಂದೂಗಳನ್ನು ಕಂಡರೆ ಅಲರ್ಜಿ. ಹಾಗಾಗಿ ಈರೀತಿ ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮುಸ್ಲೀಮರಿಗೆ ಮತದಾನದ ಹಕ್ಕು ರದ್ದುಪಡಿಸಬೇಕು ಎಂದು ಚಂದ್ರಶೇಖರ ಸ್ವಾಮೀಜಿ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ರಾಜ್ಯಾದ್ಯತ ಚರ್ಚೆ ತೀವ್ರಗೊಳ್ಳುತ್ತಿದ್ದಂತೆ ಸ್ವಾಮೀಜಿ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದರು. ಆದಾಗ್ಯೂ ಸ್ವಾಮೀಜಿ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.