ಬೆಂಗಳೂರು: ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ 306 ರೈಲ್ವೆ ಕೋಚ್ ನಿರ್ಮಾಣ ಮಾಡಲು ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ನಿಗಮ ಸಂಸ್ಥೆಗೆ 2135 ಕೋಟಿ ರೂ. ನೀಡಲು ಸಚಿವ ಸಂಪುಟ ನಿರ್ಧಾರ ಕೈಗೊಂಡಿದೆ.
ಉಪನಗರ ರೈಲು ಯೋಜನೆಯ ಎರಡನೇ ಕಾರಿಡಾರ್ ಅನ್ನು 2026ರ ಡಿಸೆಂಬರ್ ಮತ್ತು ನಾಲ್ಕನೇ ಕಾರಿಡಾರ್ ಅನ್ನು 2027ರ ಡಿಸೆಂಬರ್ ವೇಳೆಗೆ ಕಾರ್ಯಾಚರಣೆ ಪ್ರಾರಂಭಿಸಲು ನಿರ್ಧರಿಸಲಾಗಿತ್ತು. ಆದರೆ, ರೈಲ್ವೆ ಕೋಚ್ ಗಳ ನಿರ್ಮಾಣಕ್ಕೆ ಆಹ್ವಾನಿಸಿದ್ದ ಟೆಂಡರ್ ನಲ್ಲಿ ಕಂಪನಿಗಳು ಭಾಗವಹಿಸಿಲ್ಲ. ಹೀಗಾಗಿ 4300 ಕೋಟಿ ರೂ. ವೆಚ್ಚದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ತಲಾ ಶೇಕಡ 50ರಷ್ಟು ಅನುಪಾತದಲ್ಲಿ ಅನುದಾನ ಭರಿಸಿ ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಮೂಲಕವೇ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ.
ಮುಂದಿನ ಐದು ವರ್ಷಗಳಲ್ಲಿ 306 ಕೋಚ್ ಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ 2135 ಕೋಟಿ ರೂಪಾಯಿಗಳನ್ನು ನಿಗಮಕ್ಕೆ ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.