ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದು ಹೃದಯವಿದ್ರಾವಕವಾಗಿದೆ. 31 ವರ್ಷಗಳ ಹಿಂದೆ ಕಿಡ್ನಾಪ್ ಆಗಿದ್ದ ಹುಡುಗನೊಬ್ಬ ಕೊನೆಗೂ ತನ್ನ ಕುಟುಂಬವನ್ನು ಸೇರಿಕೊಂಡಿದ್ದು, ಈ ಸ್ಟೋರಿ ಎಲ್ಲರ ಕಣ್ಣಂಚನ್ನು ತೇವಗೊಳಿಸಿದೆ.
ಘಟನೆಯ ವಿವರ: ಕೆಲ ದಿನಗಳ ಹಿಂದೆ ಯುವಕನೊಬ್ಬ ಗಾಜಿಯಾಬಾದ್ ನ ಖೋಡಾ ಪೊಲೀಸ್ ಠಾಣೆಗೆ ಬಂದಿದ್ದು, ತಾನು 31 ವರ್ಷಗಳ ಹಿಂದೆ ಅಪಹರಣಕ್ಕೊಳಗಾಗಿದ್ದೆ. ಈಗ ನನ್ನ ತಂದೆ – ತಾಯಿಯನ್ನು ಹುಡುಕಿಕೊಂಡು ಬಂದಿರುವುದಾಗಿ ಹೇಳಿದಾಗ ಮೊದಲಿಗೆ ಪೊಲೀಸರು ಇದೊಂದು ಕಟ್ಟುಕಥೆ ಎಂದು ಭಾವಿಸಿದ್ದರು.
ಆದರೆ ಯುವಕ ಆತ ತನಗೆ ಗೊತ್ತಿದ್ದ ಅಲ್ಪಸ್ವಲ್ಪ ಮಾಹಿತಿಯನ್ನು ನೀಡಿದ್ದು, ಅದನ್ನು ಕೆದಕಿ 31 ವರ್ಷಗಳ ಹಿಂದೆ ನಾಪತ್ತೆಯಾದವರ ವಿವರ ಕಲೆಹಾಕಿದಾಗ ರಾಜು ಹೇಳುತ್ತಿರುವುದು ಸತ್ಯವೆಂಬ ಸಂಗತಿ ಪೊಲೀಸರಿಗೆ ಮನವರಿಕೆಯಾಗಿದೆ. ಅಂತಿಮವಾಗಿ ಆತನನ್ನು ಕುಟುಂಬದೊಂದಿಗೆ ಸೇರಿಸಲು ಪೊಲೀಸರು ಸರ್ವ ಪ್ರಯತ್ನ ನಡೆಸಿದ್ದು, ಕೊನೆಗೂ ಯಶಸ್ವಿಯಾಗಿದ್ದಾರೆ.
1993 ರಲ್ಲಿ ಅಂದರೆ ರಾಜು 9 ವರ್ಷದವನಿದ್ದಾಗ ಮೂಲತಃ ದೆಹಲಿ-ಎನ್‌ಸಿಆರ್‌ನಿಂದ ಅಕ್ಕನೊಂದಿಗೆ ಶಾಲೆಯಿಂದ ಮನೆಗೆ ಹೋಗುವ ಸಂದರ್ಭದಲ್ಲಿ ಜಗಳವಾಡಿಕೊಂಡಿದ್ದಾನೆ. ಬಳಿಕ ಮುನಿಸಿಕೊಂಡು ಸಮೀಪದಲ್ಲಿದ್ದ ಟೆಂಪೋ ಒಂದನ್ನು ಏರಿದ್ದು, ಅದರಲ್ಲಿದ್ದವರು ಈತನ ವಿವರ ಕೇಳಿ ಬಳಿಕ ಪುಸಲಾಯಿಸಿ ರಾಜಸ್ಥಾನದ ಜೈಸಲ್ಮೇರ್ ಗೆ ಕರೆದುಕೊಂಡು ಹೋಗಿದ್ದಾರೆ.
ಅಲ್ಲಿ ಆತನಿಗೆ ಮೇಕೆ, ಕುರಿ ಮೇಯಿಸುವ ಕೆಲಸ ನೀಡಿದ್ದು, ತಪ್ಪಿಸಿಕೊಳ್ಳಬಾರದೆಂಬ ಕಾರಣಕ್ಕೆ ರಾತ್ರಿ ವೇಳೆ ಕಟ್ಟಿಹಾಕುತ್ತಿದ್ದರು ಎನ್ನಲಾಗಿದೆ. ಅಲ್ಲದೇ ಆತನನ್ನು ಇರಿಸಲಾಗಿದ್ದ ಹಳ್ಳಿ ತುಂಬಾ ದೂರದಲ್ಲಿದ್ದು, ಹತ್ತಿರದ ರಸ್ತೆಯನ್ನು ತಲುಪಲು ಎರಡು ದಿನ ಬೇಕಾಗಿದ್ದ ಕಾರಣ, ಇದರಿಂದಾಗಿ ತಪ್ಪಿಸಿಕೊಳ್ಳಲು ಅಸಾಧ್ಯವಾಯಿತು.
ಇತ್ತೀಚೆಗಷ್ಟೇ ‘ಸರ್ದಾರ್ ಜಿ’ ಎಂದು ಗುರುತಿಸಲ್ಪಟ್ಟ ಕರುಣಾಮಯಿ ವ್ಯಕ್ತಿಯೊಬ್ಬರು ಕುರಿ ಮತ್ತು ಮೇಕೆ ಖರೀದಿಸಲು ಗ್ರಾಮಕ್ಕೆ ಭೇಟಿ ನೀಡಿದ್ದು, ರಾಜುವಿನೊಂದಿಗೆ ಆತ್ಮೀಯರಾದಾಗ ಆತನ ವಿವರ ಕೇಳಿದ್ದಾರೆ. ಆತ ನೀಡಿದ ಮಾಹಿತಿಯಿಂದ ಅವರ ಮನ ಕರಗಿದ್ದು, ಅವನಿಗೆ ನೆರವಾಗಲು ಬಯಸಿದ್ದಾರೆ. ಆತನ ಮೂಲದ ಬಗ್ಗೆ ಕೇಳಿದಾಗ, ಆತ ದೆಹಲಿ ಮತ್ತು ನೋಯ್ಡಾದ ಸಾಮೀಪ್ಯವನ್ನು ನೆನಪಿಸಿಕೊಂಡಿದ್ದಾನೆ ಮತ್ತು ಶಾಲೆಗೆ ಹೋಗುವ ದಾರಿಯಲ್ಲಿ ದೇವಾಲಯವಿರುವುದಾಗಿ ಹೇಳಿದ್ದಾನೆ. ಬಳಿಕ ಆ ವ್ಯಕ್ತಿ ದೆಹಲಿಗೆ ಹೋಗಲು ನೆರವಾಗಿದ್ದು, ಅಲ್ಲಿ ರಾಜುವಿಗೆ ಕ್ಷೌರ ಮಾಡಿಸಿ, ಹೊಸ ಬಟ್ಟೆ ಮತ್ತು ಸ್ವಲ್ಪ ಹಣವನ್ನು ನೀಡಿ ಹೋಗಿದ್ದಾರೆ.
ರಾಜು ಮೊದಲಿಗೆ ಗಾಜಿಯಾಬಾದ್ ನಲ್ಲಿ ಅಡ್ಡಾಡಿದ್ದು ಯಾವುದೇ ಪ್ರಯೋಜನವಾಗಾದಾಗ ಅಂತಿಮವಾಗಿ ನೋಯ್ಡಾ ಬಳಿ ಇರುವ ಖೋಡಾ ಪೊಲೀಸ್ ಠಾಣೆಗೆ ಭೇಟಿ ನೀಡಿ ತನ್ನ ಕಥೆ ಹೇಳಿಕೊಂಡಿದ್ದಾನೆ.
ರಾಜುವಿನ ಕಥೆ ಕೇಳಿದ ನಂತರ, ಪೊಲೀಸರು ಸಾಮಾಜಿಕ ಮಾಧ್ಯಮದ ವೇದಿಕೆಗಳ ಮೂಲಕ ಸಾರ್ವಜನಿಕರನ್ನು ತಲುಪಿದ್ದು, 1993 ರಿಂದ ಕಾಣೆಯಾದ ಮಕ್ಕಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಸುದ್ದಿ ಹರಡುತ್ತಿದ್ದಂತೆ, ಆ ವರ್ಷ ತಮ್ಮ ಮಕ್ಕಳನ್ನು ಕಳೆದುಕೊಂಡ ಅನೇಕರು ಪೊಲೀಸ್ ಠಾಣೆಗೆ ಭೇಟಿ ನೀಡಲು ಪ್ರಾರಂಭಿಸಿದ್ದರು.
ಈ ಪೈಕಿ ಸಾಹಿಬಾಬಾದ್ ಶಾಹಿದ್‌ನಗರದ ನಿವಾಸಿ ತುಲಾರಾಮ್ ತಮ್ಮ ಪತ್ನಿಯೊಂದಿಗೆ ಆಗಮಿಸಿ 1993 ರಲ್ಲಿ ಶಾಲೆಯಿಂದ ಹಿಂದಿರುಗುವಾಗ ತಮ್ಮ ಮಗ ಭೀಮ್ ಸಿಂಗ್ ನಾಪತ್ತೆಯಾಗಿದ್ದನ್ನು ವಿವರಿಸಿದ್ದಾರೆ. ಅಲ್ಲದೇ ಆ ಸಂದರ್ಭದಲ್ಲಿ ತುಲಾರಾಮ್ ಸಾಹಿಬಾಬಾದ್ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ವ್ಯಕ್ತಿಯ ವರದಿಯನ್ನು ಸಲ್ಲಿಸಿದ್ದರು. ಅಂತಿಮವಾಗಿ ರಾಜುವಿನ ದೈಹಿಕ ಲಕ್ಷಣ ಮತ್ತು ಗಾಯದ ಗುರುತುಗಳನ್ನು ಪರೀಕ್ಷಿಸಿ ರಾಜು, ತುಲಾರಾಮ್ ಅವರ ಮಗ ಭೀಮ್ ಸಿಂಗ್ ಎಂಬುದನ್ನು ಖಚಿತಪಡಿಸಿಕೊಂಡಿದ್ದಾರೆ.
ಗುರುತನ್ನು ದೃಢೀಕರಿಸಿದ ನಂತರ, ಪೊಲೀಸರು ಅಗತ್ಯ ದಾಖಲೆಗಳನ್ನು ಪೂರ್ಣಗೊಳಿಸಿ, 9 ನೇ ವಯಸ್ಸಿನಲ್ಲಿ ಅಪಹರಣಕ್ಕೊಳಗಾಗಿದ್ದ ಭೀಮ್ ಸಿಂಗ್ 31 ವರ್ಷಗಳ ನಂತರ ತನ್ನ ಕುಟುಂಬದೊಂದಿಗೆ ಮತ್ತೆ ಸೇರಿಸಿದ್ದಾರೆ. ಮೂರು ದಶಕಗಳಿಗೂ ಹೆಚ್ಚು ಕಾಲ ಕುಟುಂಬದಿಂದ ದೂರ ಉಳಿದಿದ್ದು ಕೊನೆಗೂ ಅವರೊಂದಿಗೆ ಸೇರಿಕೊಂಡ ಈ ಹೃದಯಸ್ಪರ್ಶಿ ಕ್ಷಣದಲ್ಲಿ ಭಾಗಿಯಾದ ಪ್ರತಿಯೊಬ್ಬರ ಕಣ್ಣಲ್ಲಿ ನೀರು ತರಿಸಿತ್ತು.