ಬೆಂಗಳೂರು: ರಾಜ್ಯ ಬಿಜೆಪಿ ದಕ್ಷಿಣ ಭಾರತದ ಹೆಬ್ಬಾಗಿಲು ಎಂದು ಕರೆಯುತ್ತಾರೆ. ಆದರೆ ರಾಜ್ಯ ಬಿಜೆಪಿಯಲ್ಲಿನ ಬಿನ್ನಮತ, ಬಣ ರಾಜಕೀಯದಿಂದಾಗಿ ಇಂದು ಪಕ್ಷಕ್ಕೆ ಈ ಸ್ಥಿತಿ ಬಂದಿರುವುದು ದುರಂತ ಎಂದು ಮಾಜಿ ಸಿಎಂ, ಬಿಜೆಪಿ ಹಿರಿಯ ನಾಯಕ ಡಿ.ವಿ.ಸದಾನಂದಗೌಡ ಕಳವಳ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ವಿ.ಸದಾನಂದಗೌಡ, ರಾಜ್ಯ ಬಿಜೆಪಿಯಲ್ಲಿನ ಅಸಮಾಧಾನ, ಭಿನ್ನಮತಗಳ ಬಗ್ಗೆ ಆರಂಭಿಕ ದಿನಗಳಲ್ಲಿಯೂ ನಾನು ಬಿಜೆಪಿ ವರಿಷ್ಠರಿಗೆ ಪತ್ರ ಬರೆದಿದ್ದೆ. ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆ ಬಗ್ಗೆಯೂ ಪತ್ರ ಬರೆದಿದೆ. ಆದರೆ ಎರಡೂ ಪತ್ರಗಳಿಗೂ ವರಿಷ್ಠರಿಂದ ಯಾವುದೇ ಉತ್ತರ ಬಾರದಿರುವುದು ಬೇಸರ ತಂದಿದೆ ಎಂದಿದ್ದಾರೆ.
ವಕ್ಫ್ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ ನಡೆಸುತ್ತಿರುವ ಹೋರಾಟಕ್ಕಿಂತ ಪಕ್ಷದ ನಾಯಕರ ನಡುವಿನ ಭಿನ್ನಮತವೇ ಹೆಚ್ಚು ಸದ್ದು ಮಾಡುತ್ತಿದೆ. ಇದು ಸರಿಯಲ್ಲ, ಪಕ್ಷದ ಕೋರ್ ಕಮಿಟಿ ಅಧ್ಯಕ್ಷನಾಗಿ ಯತ್ನಾಳ್ ತಂಡದ ಹೋರಾಟ, ಬಿಜೆಪಿಯಲ್ಲಿನ ಭಿನ್ನಮತಗಳ ವಿಚಾರವಾಗಿ ಎರಡು ಪತ್ರ ಬರೆದರೂ ಹೈಕಮಾಂಡ್ ನಿಂದ ಯಾವುದೇ ಕ್ರಮ ಜರುಗಿಸದಿರುವುದು ಹಾಗೂ ಪಕ್ಷಕ್ಕೆ ಇಂದು ಈ ಸ್ಥಿತಿ ಬಂದಿರುವುದು ಬಹಳ ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.