ರೈಲಿನ ಎಸಿ ಬೋಗಿಗಳಲ್ಲಿ ಪ್ರಯಾಣಿಕರಿಗೆ ಬ್ಲಾಂಕೆಟ್ ನೀಡಲಾಗುತ್ತದೆ. ಒಬ್ಬರು ಬಳಸಿದ ಬ್ಲಾಂಕೆಟ್ ಮತ್ತೊಬ್ಬರಿಗೂ ನೀಡಿದರೆ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಇವುಗಳನ್ನು ತಿಂಗಳಲ್ಲಿ ಎಷ್ಟು ಬಾರಿ ವಾಶ್ ಮಾಡಲಾಗುತ್ತದೆ ಎಂಬ ಕುತೂಹಲವಿದ್ದು, ಇದಕ್ಕೆ ಈಗ ರೈಲ್ವೇ ಸಚಿವರು ಉತ್ತರ ನೀಡಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಪ್ರಯಾಣಿಕರ ಹೊದಿಕೆಗಳ ನೈರ್ಮಲ್ಯ ಕಾಪಾಡಿಕೊಳ್ಳುವ ಕುರಿತ ಪ್ರಶ್ನೆಗೆ ಉತ್ತರಿಸಿದ್ದು, ತಿಂಗಳಿಗೊಮ್ಮೆ ಇವುಗಳನ್ನು ವಾಶ್ ಮಾಡಲಾಗುತ್ತದೆ ಎಂದಿದ್ದಾರೆ.
ಈ ಕುರಿತು ಬುಧವಾರ ಲೋಕಸಭೆಗೆ ಮಾಹಿತಿ ನೀಡಿದ್ದು, ರೈಲು ಪ್ರಯಾಣಿಕರಿಗೆ ನೀಡಲಾಗುವ ಹೊದಿಕೆಗಳನ್ನು ತಿಂಗಳಿಗೊಮ್ಮೆ ತೊಳೆಯಲಾಗುತ್ತದೆ ಎಂದಿದ್ದಾರೆ. ಈ ಕುರಿತು ಕಾಂಗ್ರೆಸ್ ಸಂಸದ ಕುಲದೀಪ್ ಇಂದೋರಾ ಪ್ರಶ್ನಿಸಿದ್ದರು.
ಬೆಡ್‌ರೋಲ್ ಕಿಟ್‌ಗಳಲ್ಲಿ ಕ್ವಿಲ್ಟ್ ಕವರ್‌ನಂತೆ ಹೆಚ್ಚುವರಿ ಬೆಡ್‌ಶೀಟ್ ಅನ್ನು ಒದಗಿಸಲಾಗಿದೆ ಎಂದೂ ಸಚಿವರು ಸದನಕ್ಕೆ ತಿಳಿಸಿದರು.
ಪ್ರಸ್ತುತ ರೈಲ್ವೇ ಹೊದಿಕೆಗಳು ಹಗುರವಾದ, ತೊಳೆಯಬಹುದಾದ ಮತ್ತು ಪ್ರಯಾಣದ ಸಮಯದಲ್ಲಿ ಪ್ರಯಾಣಿಕರ ಸೌಕರ್ಯವನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಆರಾಮ ಮತ್ತು ಸುರಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಹಲವಾರು ಉಪಕ್ರಮಗಳನ್ನು ಅವರು ವಿವರಿಸಿದ್ದು, ನವೀಕರಿಸಿದ ಬಿಐಎಸ್ ಮಾನದಂಡಗಳಿಗೆ ಅನುಸಾರ ಹೊಸ ಲಿನಿನ್ ಸೆಟ್‌ಗಳ ಪರಿಚಯ, ಸ್ವಯಂಚಾಲಿತ ಲಾಂಡ್ರಿ ವ್ಯವಸ್ಥೆ, ಪ್ರಮಾಣಿತ ತೊಳೆಯುವ ಉಪಕರಣಗಳು, ವಿಶೇಷ ಶುಚಿಗೊಳಿಸುವ ಏಜೆಂಟ್‌ಗಳು ಮತ್ತು ಲಾಂಡರಿಂಗ್ ಪ್ರಕ್ರಿಯೆಗಳ ಮೇಲ್ವಿಚಾರಣೆ ಇರುತ್ತದೆ ಎಂದರು.
ತೊಳೆದ ಲಿನಿನ್‌ನ ಗುಣಮಟ್ಟವನ್ನು ಮೌಲ್ಯಮಾಪನ ಮಾಡಲು ವೈಟೋ-ಮೀಟರ್‌ಗಳ ಬಳಕೆ ಮಾಡಲಾಗುತ್ತದೆ ಎಂದು ಸಚಿವರು ವಿವರಿಸಿದ್ದಾರೆ.
ಪರಿಸರ ಸ್ನೇಹಿ ಬೆಡ್‌ರೋಲ್ ಪ್ಯಾಕೇಜಿಂಗ್‌ನ ಅಳವಡಿಕೆ, ನಿಲ್ದಾಣಗಳಲ್ಲಿ ಮತ್ತು ರೈಲುಗಳಲ್ಲಿ ಲಿನಿನ್‌ನ ಸಂಗ್ರಹಣೆ, ಸಾಗಣೆ ಮತ್ತು ನಿರ್ವಹಣೆಯಲ್ಲಿ ಸುಧಾರಣೆ ಸೇರಿದಂತೆ ಪ್ರಯಾಣಿಕರ ಸೌಲಭ್ಯವನ್ನು ಇನ್ನಷ್ಟು ಹೆಚ್ಚಿಸುವ ಕುರಿತು ಸಚಿವರು ಮಾತನಾಡಿದರು.