25 ವರ್ಷದ ಬಾಂಬೆ ಐಐಟಿ ವಿದ್ಯಾರ್ಥಿಯೊಬ್ಬರು “ಡಿಜಿಟಲ್ ಬಂಧನ” ವಂಚನೆಗೆ ಬಲಿಯಾಗಿದ್ದು, 7.29 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಈ ಘಟನೆ ನವೆಂಬರ್ 27, 2024 ರಂದು ಸಂಭವಿಸಿದೆ. ಸರ್ಕಾರಿ ಅಧಿಕಾರಿಗಳಂತೆ ನಟಿಸಿದ ವಂಚಕರು ಹಣವನ್ನು ವರ್ಗಾವಣೆ ಮಾಡುವಂತೆ ವಿದ್ಯಾರ್ಥಿಗೆ ಸೂಚಿಸಿದ್ದು, ಅದರಂತೆ ಮಾಡಿ ಹಣ ಕಳೆದುಕೊಂಡು ಈಗ ಕಂಗಾಲಾಗಿದ್ದಾರೆ.
ಈಗ ಸಂತ್ರಸ್ತ ಮುಂಬೈನ ಪೊವೈ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಜೊತೆಗೆ ಇಂತಹ ವಂಚನೆಗಳಿಗೆ ಬಲಿಯಾಗದಂತೆ ಸಾರ್ವಜನಿಕರಲ್ಲಿ ಕೋರಿದ್ದಾರೆ̤
ಜುಲೈ 2024 ರಲ್ಲಿ, ವಿದ್ಯಾರ್ಥಿಯು ಭಾರತೀಯ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ (TRAI) ನ ಪ್ರತಿನಿಧಿ ಎಂದು ಹೇಳಿಕೊಳ್ಳುವ ವ್ಯಕ್ತಿಯಿಂದ ಫೋನ್ ಕರೆ ಸ್ವೀಕರಿಸಿದ್ದು, ಕರೆ ಮಾಡಿದ ವ್ಯಕ್ತಿ ನಿಮ್ಮ ಮೊಬೈಲ್ ಸಂಖ್ಯೆ ಮೂಲಕ 17 ಕಾನೂನುಬಾಹಿರ ನಡವಳಿಕೆ ವರದಿಯಾಗಿದೆ ಎಂದು ತಿಳಿಸಿದ್ದಲ್ಲದೇ ಪೊಲೀಸ್ ಠಾಣೆಯಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು (ಎನ್‌ಒಸಿ) ನೀಡುವವರೆಗೆ ಸಂಖ್ಯೆಯನ್ನು ನಿಷ್ಕ್ರಿಯಗೊಳಿಸುವುದಾಗಿ ಎಚ್ಚರಿಸಿದ್ದ.
ವಿದ್ಯಾರ್ಥಿಯ ಆಧಾರ್ ಸಂಖ್ಯೆ ಸೇರಿದಂತೆ ಇತರ ವೈಯಕ್ತಿಕ ವಿವರಗಳನ್ನು ಕೇಳುವ ಮೊದಲು ಪೊಲೀಸ್ ಅಧಿಕಾರಿಯಂತೆ ನಟಿಸುವ ವಾಟ್ಸಾಪ್ ವೀಡಿಯೊ ಕರೆಯಲ್ಲಿ ಅದನ್ನು ಇನ್ನೊಬ್ಬ ವ್ಯಕ್ತಿಗೆ ವರ್ಗಾಯಿಸಲಾಗಿತ್ತು. “ಡಿಜಿಟಲ್ ಅರೆಸ್ಟ್” ತಡೆಯಲು 29,500 ರೂ.ಗಳನ್ನು ಪಾವತಿಸುವಂತೆ ವಿದ್ಯಾರ್ಥಿಗೆ ತಿಳಿಸಲಾಯಿತು. ವಿದ್ಯಾರ್ಥಿ ಹಣ ಪಾವತಿಸುತ್ತಿದ್ದಂತೆ ಬ್ಯಾಂಕ್ ವಿವರಗಳನ್ನು ಪಡೆದುಕೊಂಡಿದ್ದ ವಂಚಕರು ಒಟ್ಟು 7.39 ಲಕ್ಷ ರೂಪಾಯಿಗಳನ್ನು ದೋಚಿದ್ದಾರೆ.
ಎಲ್ಲಾ ವಹಿವಾಟು ಮುಗಿದ ನಂತರ, ವಂಚಕರು ವಿದ್ಯಾರ್ಥಿಗೆ ಇನ್ನು ಮುಂದೆ ಬಂಧಿಸುವುದಿಲ್ಲ ಮತ್ತು ಡಿಜಿಟಲ್ ಬಂಧನವನ್ನು ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದು, ಬಳಿಕ ವಿದ್ಯಾರ್ಥಿ “ಡಿಜಿಟಲ್ ಅರೆಸ್ಟ್” ಕುರಿತು ಅಂತರ್ಜಾಲ ಜಾಲಾಡಿದಾಗ ತಾನು ಮೋಸ ಹೋಗಿರುವುದು ಅರಿವಾಗಿದೆ.
ʼಡಿಜಿಟಲ್ ಅರೆಸ್ಟ್ʼ ಸ್ಕ್ಯಾಮ್ ಎಂದರೇನು ?
ಡಿಜಿಟಲ್ ಬಂಧನದ ಹಗರಣಗಳಲ್ಲಿ ಅಪರಾಧಿಗಳು ಪೊಲೀಸ್ ಅಧಿಕಾರಿಗಳು ಅಥವಾ ಸರ್ಕಾರದ ಪ್ರತಿನಿಧಿಗಳಂತೆ ನಟಿಸಿ ಆಡಿಯೋ ಅಥವಾ ವೀಡಿಯೊ ಕರೆ ಮೂಲಕ ಬೆದರಿಕೆ ಹಾಕುತ್ತಾರೆ. ನಿಮ್ಮಿಂದ ಕಾನೂನು ಬಾಹಿರ ಕೃತ್ಯ ನಡೆದಿದೆ ಎಂದು ಹೆದರಿಸಿ ಬಂಧನ ತಪ್ಪಿಸಲು ಹಣ ಪಾವತಿಸುವಂತೆ ಒತ್ತಾಯಿಸಲಾಗುತ್ತದೆ. ಈ ರೀತಿಯ ಸೈಬರ್ ಕ್ರೈಮ್ ಭಾರತದಲ್ಲಿ ಹೆಚ್ಚಾಗುತ್ತಿದ್ದು, ಇದಕ್ಕಾಗಿ ಎಚ್ಚರದಿಂದ ಇರುವಂತೆ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಿಗೆ ಸೂಚಿಸಿದ್ದಾರೆ.