ಕಲಬುರಗಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮತ್ತೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಕಿಡಿಕಾರಿದ್ದಾರೆ. ನಾವು ಯಾರಿಗೂ ಅಂಜುವುದಿಲ್ಲ, ಯಾರಿಗೂ ಅಪ್ಪಾಜಿ, ಅಪ್ಪಾಜಿ ಎನ್ನಲ್ಲ ಎಂದು ಟಾಂಗ್ ನೀಡಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯತ್ನಾಳ್, ನಾವು ನಮ್ಮ ತಂದೆ-ತಾಯಿ ಬಿಟ್ಟು ಬೇರೆ ಯಾರಿಗೂ ಅಪ್ಪಾಜಿ ಎಂದು ಕರೆಯಲ್ಲ. ವಕ್ಫ್ ವಿರುದ್ಧ ಹೋರಾಟ ಜನರ ಸಲುವಾಗಿ ಹೊರತು ರಾಜಕೀಯಕ್ಕಾಗಿ ಅಲ್ಲ ಎಂದು ಹೇಳಿದ್ದಾರೆ.
ನಾವು ವಕ್ಫ್ ವಿರುದ್ಧ ಹೋರಾಡಿದರೆ ತಂತ್ರ ಅನ್ನುತ್ತಾರೆ. ಧರ್ಮ, ರೈತರು ಉಳಿಯಬೇಕಿದ್ರೆ ಹೋರಾಟಕ್ಕೆ ಬನ್ನಿ ಎಂದು ಆಯಾಭಾಗದ ಬಿಜೆಪಿ ಕಾರ್ಯಕರ್ತರಿಗೆ ಹೇಳಿದ್ದೆ. ಮೇಲಿನಿಂದ ಸ್ಟ್ರಿಕ್ಟ್ ಆರ್ಡರ್ ಆಗಿದೆ ಎಂದ್ರು ಕೆಲವರು. ಬರದಿದ್ರೆ ಬಿಡ್ರಿ, ನಾವೂ ಬಿಜೆಪಿಯವರೇ ಬೇರೆಯವರಲ್ಲ ಎಂದರು.
ನಾವು ರಾಜಕೀಯ ತಂತ್ರಕ್ಕಾಗಿ ಹೋರಾಟ ಮಾಡುತ್ತೇವೆ ಎನ್ನಲು ಈಗೇನು ಲೋಕಸಭಾ ಚುನಾವಣೆ, ವಿಧಾನಸಭಾ ಚುನಾವಣೆ ಇದೆಯೇ? ನಮಗೆ ರಾಜ್ಯದಲ್ಲಿ ದೊಡ್ಡ ಲೀಡರ್ ಆಗುವುದು ಬೇಕಿಲ್ಲ, ನಾವು ಹಿರಿಯರಿದ್ದೇವೆ ಇವರಿಂದ ಕಲಿಯಬೇಕಿಲ್ಲ. ಇದರಲ್ಲಿ ನಮ್ಮ ಸ್ವಾರ್ಥ ಇಲ್ಲ. ನಾವು ನಮ್ಮ ಪರಿಶ್ರಮದಿಂದ ಆಯ್ಕೆಯಾಗಿದ್ದೇವೆ ಹೊರತು ಇವರ ಬೆಂಬಲದಿಂದಾಗಿ ಅಲ್ಲ. ಡಿಸೆಂಬರ್ 2ರಂದು ದೆಹಲಿಗೆ ತೆರಳಿ ವರಿಷ್ಠರಿಗೆ ವರದಿ ನೀಡುತ್ತೇವೆ ಎಂದು ಹೇಳಿದರು.