ಇಂದು ಮುಂಜಾನೆ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್ ವೇಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಐವರು ವೈದ್ಯರು ಸಾವನ್ನಪ್ಪಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸೈಫೈನಲ್ಲಿರುವ ಉತ್ತರ ಪ್ರದೇಶ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ತರಬೇತಿ ಪಡೆದ ವೈದ್ಯರು, ಲಕ್ನೋದಲ್ಲಿ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಮುಂಜಾನೆ 3.30ರ ಸುಮಾರಿಗೆ ಇವರುಗಳು ಪ್ರಯಾಣಿಸುತ್ತಿದ್ದ ಸ್ಕಾರ್ಪಿಯೋ ನಿಯಂತ್ರಣ ತಪ್ಪಿ ಡಿವೈಡರ್ ಮುರಿದು ಎದುರುಗಡೆಯಿಂದ ಬರುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ವರದಿಗಳ ಪ್ರಕಾರ, SUV ಚಾಲಕ ನಿದ್ರೆಗೆ ಜಾರಿದ್ದೆ ಈ ಭೀಕರ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ.
ಸಾವನ್ನಪ್ಪಿದವರನ್ನು ಡಾ ಅನಿರುದ್ಧ್ ವರ್ಮಾ, ಡಾ ಸಂತೋಷ್ ಕುಮಾರ್ ಮೌರ್ಯ, ಡಾ ಜೈವೀರ್ ಸಿಂಗ್, ಡಾ ಅರುಣ್ ಕುಮಾರ್ ಮತ್ತು ಡಾ ನಾರ್ದೇವ್ ಎಂದು ಗುರುತಿಸಲಾಗಿದೆ.
ತಿರ್ವಾ ವಲಯದ ಅಧಿಕಾರಿ ಪ್ರಿಯಾಂಕಾ ಬಾಜಪೈ ಮಾತನಾಡಿ, ಇಂದು ಮುಂಜಾನೆ 3.30ರ ಸುಮಾರಿಗೆ ಲಕ್ನೋದಿಂದ ಆಗ್ರಾ ಕಡೆಗೆ ಹೊರಟಿದ್ದ ಸ್ಕಾರ್ಪಿಯೋ ಬ್ಯಾಲೆನ್ಸ್ ಕಳೆದುಕೊಂಡು ಡಿವೈಡರ್ ಮುರಿದು ಸಮಾನಾಂತರ ಮಾರ್ಗಕ್ಕೆ ನುಗ್ಗಿ ಎದುರಿನಿಂದ ಬರುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಐವರು ವೈದ್ಯರು ಸಾವನ್ನಪ್ಪಿದ್ದು, ಅವರೆಲ್ಲರೂ ಸೈಫೈ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿಸಿದ್ದಾರೆ.