ಬೆಂಗಳೂರು: ಸಂವಿಧಾನವನ್ನು ಕಿತ್ತು ಹಾಕುತ್ತೇವೆ, ಬದಲಾಯಿಸುತ್ತೇವೆ ಎಂದು ಬಿಜೆಪಿಯವರನ್ನೇ ಜನರು ಬದಲಾಯಿಸಿದರು. ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿದವರೆಲ್ಲ ಮನೆಗೆ ಹೋಗಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದ್ದಾರೆ.
ಬೆಂಗಳೂರಿನ ವಸಂತ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ನಡೆದ ‘ಸಂವಿಧಾನ ದಿನಾಚರಣೆʼಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಸಂವಿಧಾನದ ಬದಲಾವಣೆ ಬಗ್ಗೆ ಮಾತನಾಡಿದ ಬಿಜೆಪಿಯವರಿಗೆ ತಿರುಗೇಟು ನೀಡಲು ರಾಹುಲ್ ಗಾಂಧಿ ಅವರು ತಮ್ಮ ಎಲ್ಲಾ ಭಾಷಣದ ವೇಳೆಯೂ ಸಂವಿಧಾನದ ಪ್ರತಿ ಹಿಡಿದು ಮಾತು ಪ್ರಾರಂಭಿಸುತ್ತಿದ್ದರು. ಇದರಿಂದ ಪ್ರಧಾನ ಮಂತ್ರಿಗಳು ಸಂವಿಧಾನ ಪ್ರತಿಗೆ ನಮಸ್ಕರಿಸಿ ಪ್ರಮಾಣ ವಚನ ತೆಗೆದುಕೊಳ್ಳುವಂತಹ ಸಂದರ್ಭ ಸೃಷ್ಟಿಯಾಯಿತು. ನಮ್ಮ ಇಂಡಿಯಾ ಒಕ್ಕೂಟದ ಸಂಸದರು ಸಂವಿಧಾನದ ಪ್ರತಿ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ್ದು ಇತಿಹಾಸ ಎಂದರು.
ಹೋರಾಟ ಮಾಡದೇ ಇದ್ದರೂ ಪರವಾಗಿಲ್ಲ ಮಾರಾಟ ಮಾತ್ರ ಆಗಬೇಡ ಎನ್ನುವ ಕಿವಿಮಾತನ್ನು ರಾಜಕಾರಣಿಗಳಿಗೆ ಅಂಬೇಡ್ಕರ್ ಅವರು ಹೇಳಿದ್ದಾರೆ. ನಾವುಗಳು ಇತಿಹಾಸದಿಂದ ಪಾಠ ಕಲಿಯದೇ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ. ಆದ ಕಾರಣ ಪ್ರತಿಯೊಬ್ಬರು ಇತಿಹಾಸದಿಂದ ಪಾಠ ಕಲಿಯಬೇಕು ಎನ್ನುವ ಸಂದೇಶವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆ ನೀಡಿದ್ದಾರೆ ಎಂದು ಹೇಳಿದರು.
ಅನೇಕ ರಾಜ್ಯಗಳಲ್ಲಿ ಜನರಿಂದ ಆಯ್ಕೆಯಾದ ಶಾಸಕರು ಮಾರಾಟವಾಗಿರುವ ನಿದರ್ಶನಗಳನ್ನು ನೋಡಿದ್ದೇವೆ. ಇದು ನಮ್ಮೆಲ್ಲರ ಬದುಕಿಗೂ ಸಂಬಂಧ ಪಡುತ್ತದೆ ಎನ್ನುವ ಕಿವಿಮಾತನ್ನು ನಮಗೆ ಅಂಬೇಡ್ಕರ್ ಅವರು ಬಿಟ್ಟು ಹೋಗಿದ್ದಾರೆ ಎಂದರು.
ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ಧರ್ಮ ಗ್ರಂಥಗಳನ್ನು ಆಯಾಯ ಧರ್ಮದವರು ಪವಿತ್ರ ಎಂದು ಹೇಳುತ್ತಾರೆ. ಇಡೀ ಭಾರತಕ್ಕೆ ಸಂವಿಧಾನವೇ ಪವಿತ್ರ ಗ್ರಂಥ. ಇದು ನಮ್ಮೆಲ್ಲರನ್ನು ರಕ್ಷಣೆ ಮಾಡುತ್ತಿದೆ ಎಂದು ಹೇಳಿದರು.
ನಮ್ಮ ರಾಜಕೀಯ ಆಯಸ್ಸು ಇನ್ನು 10- 15 ವರ್ಷ. ವಿದ್ಯಾರ್ಥಿಗಳು ಮುಂದಿನ 60- 70 ವರ್ಷಗಳ ಕಾಲ ಈ ದೇಶವನ್ನು ಮುನ್ನಡೆಸುವವರು. ಅವರಿಗೆ ಸಂವಿಧಾನದ ಬಗ್ಗೆ ಅಡಿಪಾಯ ಹಾಕಬೇಕು ಎನ್ನುವ ಕಾರಣಕ್ಕೆ ಜಾಗೃತಿ ಮೂಡಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಅಮೆರಿಕಾದ ಮಾಜಿ ಅಧ್ಯಕ್ಷರಾದ ಬರಾಕ್ ಬಬಾಮ ಅವರು ಭಾರತದ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಈ ದೇಶದ ಚುಕ್ಕಾಣಿ ಹಿಡಿದ ಸಂದರ್ಭದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾದರು. ಅಂಬೇಡ್ಕರ್ ಅವರು ಇಡೀ ಪ್ರಪಂಚವೇ ಸ್ಮರಿಸಿಕೊಳ್ಳುವಂತಹ ಮಹಾನ್ ಗ್ರಂಥ ನಮಗೆ ನೀಡಿದ್ದಾರೆ ಎಂದು ಹೇಳಿದರು.
ಸಚಿವರಾದ ಎಚ್.ಸಿ. ಮಹದೇವಪ್ಪ ಅವರು ಸಮಾಜ ಕಲ್ಯಾಣ ಇಲಾಖೆಗೆ ಹೊಸ ರೂಪವನ್ನು ನೀಡಿದ್ದಾರೆ. ರಾಜಕೀಯದಿಂದ ನಿವೃತ್ತಿ ಪಡೆದ ಮೇಲೆ ಮಹದೇವಪ್ಪ ಅವರನ್ನು ನಮ್ಮ ವಿಶ್ವವಿದ್ಯಾನಿಲಯಗಳಿಗೆ ಸಂದರ್ಶಕ ಉಪನ್ಯಾಸಕರನ್ನಾಗಿ ಕಳುಹಿಸಬೇಕು ಎನ್ನುವ ಅಭಿಲಾಷೆ ಅವರ ಮಾತುಗಳನ್ನು ಕೇಳಿದಾಗ ಅನ್ನಿಸಿತು ಎಂದರು.
ಗುಣಕ್ಕೆ ಮತ್ಸರವಿಲ್ಲ ಎನ್ನುವ ರೀತಿ ನಮ್ಮ ಸಂವಿಧಾನವೇ ನಮ್ಮ ಧರ್ಮ. ಚಿಕ್ಕ ಮಕ್ಕಳಿಗೂ ಅರ್ಥವಾಗುವ ರೀತಿ ಅವರು ಸಂವಿಧಾನದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಸಂವಿಧಾನ ಪೀಠಿಕೆಯನ್ನು ಶಾಲಾ, ಕಾಲೇಜುಗಳಲ್ಲಿ ಪಠಿಸಬೇಕು ಎನ್ನುವ ಹೊಸ ಆಚರಣೆಗೆ ನಾಂದಿ ಹಾಡಿದವರು. ಇದಕ್ಕಾಗಿ ಅವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು.