ಕಲಬುರಗಿ: ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಒಂದು ದಿನದ ಗಂಡು ಶಿಶುವನ್ನು ಮಹಿಳೆಯರಿಬ್ಬರು ಕಿಡ್ನ್ಯಾಪ್ ಮಾಡಿರುವ ಘಟನೆ ನಡೆದಿದೆ.
ನರ್ಸ್ ವೇಷದಲ್ಲಿ ಬಂದ ಮಹಿಳೆಯರಿಬ್ಬರು ನವಜಾತ ಶಿಶುವಿನ ರಕ್ತ ತಪಾಸಣೆ ನಡೆಸಬೇಕು ಎಂದು ಹೇಳಿ ಶಿಶುವನ್ನು ಎತ್ತಿಕೊಂಡು ಹೋದವರು ಪರಾರಿಯಾಗಿದ್ದಾರೆ. ಘಟನೆ ಬಗ್ಗೆ ವರದಿಯಾಗುತ್ತಿದ್ದಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಆಸ್ಪತ್ರೆಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗುವಿನ ತಾಯಿ ಕಸ್ತೂರಿ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ತಕ್ಷಣ ಆರೋಪಿಗಳನ್ನು ಪತ್ತೆ ಮಾಡಿ ಶಿಶುವನ್ನು ರಕ್ಷಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.
ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದ ನಿವಾಸಿ ಕಸ್ತೂರಿ ಹೆರಿಗೆ ನೋವಿನಿಂದ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ನವೆಂಬರ್ 25ರಂದು ಬೆಳಗಿನ ಜಾವ 4 ಗಂಟೆಗೆ ಕಸ್ತೂರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸಂಜೆ ನರ್ಸ್ ವೇಷದಲ್ಲಿ ಬಂದ ಇಬ್ಬರು ಮಹಿಳೆಯರು ರಕ್ತ ತಪಾಸಣೆ ಮಾಡಬೇಕು ಮಗುವನ್ನು ಕರೆದುಕೊಂಡು ಬನ್ನಿ ಎಂದು ಹೇಳಿದ್ದರು. ಕಸ್ತೂರಿ ಸಂಬಂಧಿ ಮಹಿಳೆ ಮಗು ಕರೆದುಕೊಂಡು ಹೋಗಿದ್ದರು. ಈ ವೇಳೆ ನರ್ಸ್ ವೇಷದಲ್ಲಿದ್ದ ಮಹಿಳೆಯರು ಮಗುವನ್ನು ಕೊಡಿ ರಕ್ತ ತಪಾಸಣೆ ನಡೆಸಬೇಕು ಎಂದು ಎತ್ತಿಕೊಂಡವರು ಎಸ್ಕೇಪ್ ಆಗಿದ್ದಾರೆ. ಹೆತ್ತ ಕಂದಮ್ಮನನ್ನು ಕಳೆದುಕೊಂಡು ತಾಯಿ ಕಸ್ತೂರಿ ಕಣ್ಣೀರುಡುತ್ತಿದ್ದಾರೆ.
ನವಜಾತ ಶಿಶುವನ್ನು ಎತ್ತಿಕೊಂಡು ಪರಾರಿಯಾಗುತ್ತಿರುವ ಮಹಿಳೆಯರ ದೃಶ್ಯ ಆಸ್ಪತ್ರೆಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಬ್ರಹ್ಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವಜಾತ ಶಿಶು ಕಳ್ಳತನ ವಿಚಾರ ಗೊತ್ತಾಗುತ್ತಿದ್ದಂತೆ ಇದೀಗ ಸಚಿವ ಶರಣಪ್ರಕಾಶ್ ಪಾಟೀಲ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.