alex Certify ಗೆದ್ದಾಗ ಬೀಗಿಲ್ಲ, ಸೋತಾಗ ಕುಗ್ಗಿಲ್ಲ. ಸೋತ ಹತಾಶೆಯಲ್ಲಿ ಅನ್ಯರನ್ನು ಹೀಗಳೆದಿಲ್ಲ: ನಿಖಿಲ್ ಸೋಲಿನ ಬಗ್ಗೆ ಅನಿತಾ ಕುಮಾರಸ್ವಾಮಿ ಪ್ರತಿಕ್ರಿಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೆದ್ದಾಗ ಬೀಗಿಲ್ಲ, ಸೋತಾಗ ಕುಗ್ಗಿಲ್ಲ. ಸೋತ ಹತಾಶೆಯಲ್ಲಿ ಅನ್ಯರನ್ನು ಹೀಗಳೆದಿಲ್ಲ: ನಿಖಿಲ್ ಸೋಲಿನ ಬಗ್ಗೆ ಅನಿತಾ ಕುಮಾರಸ್ವಾಮಿ ಪ್ರತಿಕ್ರಿಯೆ

ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಒಬ್ಬರು ಗೆಲ್ಲಬೇಕಾದರೆ ಇನ್ನೊಬ್ಬರು ಸೋಲಲೇಬೇಕಾಗುತ್ತದೆ. ರಾಜಕಾರಣದಲ್ಲಿ ನನಗಾಗಲಿ, ನನ್ನ ಪತಿಗಾಗಲಿ, ನನ್ನ ಪೂಜ್ಯ ಮಾವನವರಿಗೇ ಆಗಲಿ ಗೆಲುವು-ಸೋಲು ಹೊಸದಲ್ಲ. ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿದ್ದೇವೆ. ಗೆದ್ದಾಗ ಬೀಗಿಲ್ಲ, ಸೋತಾಗ ಕುಗ್ಗಿಲ್ಲ. ಸೋತ ಹತಾಶೆಯಲ್ಲಿ ಅನ್ಯರನ್ನು ಹೀಗಳೆದಿಲ್ಲ ಎಂದು ಚನ್ನಪಟ್ಟಣದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಸೋಲಿನ ಕುರಿತಾಗಿ ಅನಿತಾ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಅವರ ಹೇಳಿಕೆಯ ಪೂರ್ಣ ವಿವರ…

“ಎಲ್ಲರಿಗೂ ನಮಸ್ಕಾರ

ನನ್ನ ಪುತ್ರ ನಿಖಿಲ್ ಕುಮಾರಸ್ವಾಮಿ, ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಪರಾಜಯ ಹೊಂದಿದ್ದಾನೆ, ಒಪ್ಪುತ್ತೇನೆ. ಚುನಾವಣೆ ವ್ಯವಸ್ಥೆಯಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ ಹಾಗೂ ಒಬ್ಬರು ಗೆಲ್ಲಬೇಕಾದರೆ ಇನ್ನೊಬ್ಬರು ಸೋಲಲೇಬೇಕಾಗುತ್ತದೆ. ಆದರೆ, ಸೋಲಿಗೆ ಅನೇಕ ಕಾರಣಗಳಿರುತ್ತವೆ. ಹಾಗೆಂದು ನಿಖಿಲ್ ಸೋಲಿನ ಕಾರಣಗಳ ಬಗ್ಗೆ ಚರ್ಚಿಸುವುದು ನನ್ನ ಉದ್ದೇಶವಲ್ಲ. ರಾಜಕಾರಣದಲ್ಲಿ ನನಗಾಗಲಿ, ನನ್ನ ಪತಿಗಾಗಲಿ ಅಥವಾ ನನ್ನ ಪೂಜ್ಯ ಮಾವನವರಿಗೇ ಆಗಲಿ ಗೆಲುವು, ಸೋಲು ಹೊಸದೇನಲ್ಲ. ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿದ್ದೇವೆ. ಗೆದ್ದಾಗ ಬೀಗಿಲ್ಲ, ಸೋತಾಗ ಕುಗ್ಗಿಲ್ಲ. ಸೋತ ಹತಾಶೆಯಲ್ಲಿ ಅನ್ಯರನ್ನು ಹೀಗಳೆದಿಲ್ಲ. ನನ್ನ ಮಗನಿಗೂ ಇದೇ ಅನ್ವಯ ಆಗುತ್ತದೆ.

ನನ್ನ ಮಗನ ಬಗ್ಗೆ ರಾಜ್ಯದ ಜನತೆಗೆ ಹೆಚ್ಚೇನೂ ಹೇಳುವ ಅಗತ್ಯವಿಲ್ಲ ಅವನು ಒಳ್ಳೆಯ ಮಗ, ಒಳ್ಳೆಯ ಪತಿ, ಒಳ್ಳೆಯ ತಂದೆ. ರಾಜಕಾರಣಕ್ಕೆ ಬರುವ ಮುನ್ನ ಒಳ್ಳೆಯ ನಾಯಕ ನಟ. ಅವನಂಥ ಒಳ್ಳೆಯ ಮಗನನ್ನು ಪಡೆದಿದ್ದಕ್ಕಾಗಿ ನಾನೂ ನನ್ನ ಪತಿ ಹೆಮ್ಮೆಪಡುತ್ತೇವೆ. ತಾಯಿಯಾಗಿ ಅವನ ಯಶಸ್ಸನ್ನು ಸಂಭ್ರಮಿಸುತ್ತೇನೆ. ಅವನಿಗೆ ಕಷ್ಟ ಎದುರಾದಾಗ ಕಣ್ಣೀರಿಟ್ಟಿದ್ದೇನೆ. ನನ್ನ ಕರುಳಬಳ್ಳಿಯ ಮೇಲೆ ನನಗಷ್ಟು ಮಮಕಾರ ಇರುತ್ತದಲ್ಲವೇ? ನನ್ನಂತಹ ಎಲ್ಲಾ ತಾಯಂದಿರಿಗೂ ನನ್ನ ಭಾವನೆಗಳು ಅರ್ಥವಾಗುತ್ತವೆ ಎನ್ನುವ ವಿಶ್ವಾಸ ನನ್ನದು.

ನನ್ನ ಮಗ 3ನೇ ಸಲ ಸೋತಿದ್ದಾನೆ. ಅವನು ಚುನಾವಣೆಯಲ್ಲಿ ಮಾತ್ರ ಸೋತಿದ್ದಾನೆಯೇ ಹೊರತು ಮನುಷ್ಯನಾಗಿ ಸೋತಿಲ್ಲ, ಅವನ ಮಾನವೀಯತೆ, ಸಹೃದಯತೆ ಸೋತಿಲ್ಲ. ಅವನ ಮನಸ್ಸು, ಹೃದಯ ವೈಶಾಲ್ಯತೆ ಏನೆಂದು ತಾಯಿಯಾಗಿ ನನಗೆ ಚನ್ನಾಗಿ ಗೊತ್ತು.

ನಾನು ಸದಾ ಆ ಭಗವಂತನಲ್ಲಿ ನಂಬಿಕೆ ಇಟ್ಟಿದ್ದೇನೆ. ನನ್ನ ಮಗನ ಮೇಲೆ ಆ ದೈವದ ಕರುಣೆ, ಅನುಗ್ರಹವಿದೆ ಹಾಗೂ ಚನ್ನಪಟ್ಟಣ ಜನತೆಯ ಪ್ರೀತಿ ವಿಶ್ವಾಸವೂ ಸದಾ ಅವನ ಮೇಲಿರುತ್ತದೆ. ಇಂದಲ್ಲ ನಾಳೆ ಜನಸೇವೆ ಮಾಡುವ ಅವಕಾಶ ಅವನಿಗೆ ಸಿಕ್ಕೇ ಸಿಗುತ್ತದೆ ಎನ್ನುವ ಅಚಲ ನಂಬಿಕೆ ನನ್ನದು” ಎಂದು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...