ಬೆಂಗಳೂರು: ಜನರು ಬಯಸಿದರೆ ಕಾಂಗ್ರೆಸ್ ಸೇರುವುದಾಗಿ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಇದು ಜಿಟಿಡಿ ಅವರೊಬ್ಬರ ಅಭಿಪ್ರಾಯ ಅಲ್ಲ, ಬಹಳಷ್ಟು ಜನ ಬಿಜೆಪಿಯವರು ಇದೇ ಅಭಿಪ್ರಾಯ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಬಿಜೆಪಿಯವರು ಬೆಂಬಲ ನೀಡದೆ ಇದ್ದಿದ್ದರೆ ನಾವು ಚುನಾವಣೆಯಲ್ಲಿ ಗೆಲ್ಲಲು ಆಗುತ್ತಿರಲಿಲ್ಲ. ಬಿಜೆಪಿ ನಾಯಕ ಅಶ್ವಥ್ ನಾರಾಯಣ ಅವರು ‘ನನಗೆ ಮೊದಲೇ ತಿಳಿದಿತ್ತು, ಯೋಗೇಶ್ವರ್ ಅವರು ಗೆಲ್ಲುತ್ತಾರೆ ಎಂದು ಹೇಳಿದ್ದಾರೆ. ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವರು ಈ ರೀತಿ ಹೇಳಲು ದಡ್ಡರೇ?. ಅವರಿಗೆ ಜನರ ನಾಡಿ ಮಿಡಿತ ಗೊತ್ತಿತ್ತು ಎಂದು ಟಾಂಗ್ ನೀಡಿದರು.
ಬಿಜೆಪಿ ಕಾರ್ಯಕರ್ತರನ್ನು ಬಿಟ್ಟು ಬಿಡೋಣ. ಎದುರಾಳಿ ಪಕ್ಷದವರು ಗುರುತು ಮಾಡಿಕೊಂಡು ಪ್ರತಿದಿನ ಒಂದಷ್ಟು ಜನರ ಮನೆಗೆ ಹೋಗುತ್ತಾ ಇದ್ದರು. ಅವರು ಹಾಗೂ ಅವರ ಬೂತ್ ಗಳಲ್ಲಿ ಯಾರಿಗೆ ಮತ ಬಿದ್ದಿದೆ ಎಂಬುದನ್ನು ಪರಿಶೀಲನೆ ಮಾಡಿ. ಎಲ್ಲವನ್ನೂ ಬಿಚ್ಚಿ ಹೇಳಲು ಹೋಗುವುದಿಲ್ಲ ಎಂದರು.
ಇದೇ ವೇಳೆ ಜೆಡಿಎಸ್ ನಾಯಕರನ್ನು ಕಾಂಗ್ರೆಸ್ ಗುರಿಯಾಗಿಸಿಕೊಂಡಿದೆ ಎಂಬ ಆರೋಪಕ್ಕೆ ಸಮಯವೇ ಉತ್ತರ ಕೊಡುತ್ತದೆ ಎಂದು ಹೇಳಿದರು.