ಬೆಂಗಳೂರು: ಉಪಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಮೂರು ಕ್ಷೇತ್ರಗಳಲ್ಲಿಯೂ ಆಡಳಿತಾರೂಢ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ವಿಪಕ್ಷ ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ. ಕೊನೇ ಕ್ಷಣದಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದ್ದೇ ಬಿಜೆಪಿ ಸೋಲಿಗೆ ಕಾರಣ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಿಶ್ಲೇಷಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ನಾವು ಕೂಡ ಒಂದು ವರ್ಷ, ಆರು ತಿಂಗಳಿಂದ ಅಭ್ಯರ್ಥಿ ತಯಾರು ಮಾಡಿದ್ದರೆ ಇಂದು ಒಳ್ಳೆಯ ಫಲಿತಾಂಶ ಬರುತ್ತಿತ್ತು. ನಾವು ಕೊನೇ ಹಂತದಲ್ಲಿ ಚುನಾವಣೆ ಘೋಷಣೆ ಆದಮೇಲೆ ಅಭ್ಯರ್ಥಿಗಳನ್ನು ತಯಾರು ಮಾಡಿದ್ದು ಕೂಡ ಹಿನ್ನಡೆಗೆ ಕಾರಣವಾಗಿದೆ ಎಂದಿದ್ದಾರೆ.
ಶಿಗ್ಗಾಂವಿ ಹಾಗೂ ಚನ್ನಪತ್ಟಣದಲ್ಲಿ ಕೊನೆವರೆಗೂ ನಾವು ಅಭ್ಯರ್ಥಿ ಘೋಷಿಸಿರಲಿಲ್ಲ. ಬೇಗನೇ ಅಭ್ಯರ್ಥಿ ಘೋಷಣೆ ಮಾಡಿದ್ದು ಕಾಂಗ್ರೆಸ್ ಗೆ ಪ್ಲಸ್ ಪಾಯಿಂಟ್ ಆಗಿದೆ. ರಾಜೀನಾಮೆ ಕೊಟ್ಟ ಕೂಡಲೇ ನಮ್ಮ ಅಭ್ಯರ್ಥಿ ಘೋಷಣೆ ಮಾಡಬೇಕಿತ್ತು. ಆಗ ಗೆಲುವಾಗುತ್ತಿತ್ತು ಎಂದಿದ್ದಾರೆ.
ಇನ್ನು ಆಡಳಿತಕ್ಕೆ ಗೆಲುವು ಆಗಿರಿವುದು ಅತ್ಯಂತ ಸಹಜ. ಸರ್ಕಾರ ನಡೆಸುತ್ತಿರುವ ಪಕ್ಷಕ್ಕೆ ಮತ ಹಾಕದಿದ್ದರೆ ಅಭಿವೃದ್ಧಿ ಕಾರ್ಯ ಕುಂಠಿತವಾಗಬಹುದು ಎಂಬ ಭಯದಿಂದ ಮ್ಮತದಾರರು ವೋಟ್ ಮಾಡಿರುವ ಸಾಧ್ಯತೆ ಇದೆ. ಇನ್ನು ನಿಖಿಲ್ ಕುಮಾರಸ್ವಾಮಿ ಮೂರನೇ ಬಾರಿಯೂ ಸೋಲನುಭವಿಸಿರುವುದು ನಮಗೂ ತುಂಬಾ ನೋವಾಗಿದೆ. ಆ ಕ್ಷೇತ್ರದಲ್ಲಿ ಅವರಿಗೆ ಅದೃಷ್ಟವಿಲ್ಲ ಎನಿಸುತ್ತದೆ. ಮುಂದಿನ ದಿನಗಳಲ್ಲಿ ಅವರಿಗೂ ಒಳ್ಳೆಯದಾಗಬಹುದು ಎಂಬ ವಿಶ್ವಾಸ ವ್ಯಕ್ತಪಡಿಸುತ್ತೇವೆ ಎಂದರು.