ಬೆಂಗಳೂರು: ಇ- ಕಾಮರ್ಸ್ ಕಂಪನಿ ಅಮೆಜಾನ್ ನಿಂದ ಅಸಲಿ ಉತ್ಪನ್ನಗಳನ್ನು ಖರೀದಿಸಿ ಬಳಿಕ ನಕಲಿ ವಸ್ತುಗಳನ್ನು ಹಿಂತಿರುಗಿಸುವ ಮೂಲಕ ಒಟ್ಟು 69 ಲಕ್ಷ ರೂಪಾಯಿ ಮರುಪಾವತಿ ಪಡೆದು ವಂಚಿಸಿದ ಪ್ರಕರಣದಲ್ಲಿ ಇಬ್ಬರ ವಿರುದ್ಧ ದಾಖಲಾದ ಎಫ್ಐಆರ್ ರದ್ದು ಮಾಡಲು ಹೈಕೋರ್ಟ್ ನಿರಾಕರಿಸಿದೆ.
ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದು ಮಾಡುವಂತೆ ಕೋರಿ ಬೆಂಗಳೂರಿನ ಸೌರೀಷ್ ಬೋಸ್, ದೀಪನ್ವಿತ ಘೋಷ್ ಸಲ್ಲಿಸಿದ ಅರ್ಜಿಗಳನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ವಜಾಗೊಳಿಸಿದೆ.
ತೀರ್ಪು ಪ್ರಕಟಿಸುವ ಮುನ್ನ ಇದು ಆಧುನಿಕ ಯುಗದ ಅಪರಾಧ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಅರ್ಜಿದಾರರು ಅಮೆಜಾನ್ ನಿಂದ ಅಸಲಿ ಉತ್ಪನ್ನ ಖರೀದಿಸಿ ನಂತರ ನಕಲಿ ಉತ್ಪನ್ನ ಹಿಂತಿರುಗಿಸಿ ಮರುಪಾವತಿ ಪಡೆಯುತ್ತಿದ್ದರು. ಅಮೆಜಾನ್ ಕಂಪನಿಯ ಉದ್ಯೋಗಿ ಇದನ್ನು ಪತ್ತೆ ಹಚ್ಚಿದ್ದು, 2017ರಲ್ಲಿ ಅರ್ಜಿದಾರರ ವಿರುದ್ಧ ವಂಚನೆ ಆರೋಪ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ದೂರು ದಾಖಲಿಸಲಾಗಿತ್ತು.