ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ನ್ಯಾಯಾಂಗ ನಿಂದನೆ ದೂರು ಸಲ್ಲಿಸಲು ಅನುಮತಿ ನೀಡುವಂತೆ ರಾಜ್ಯದ ಅಡ್ವೊಕೇಟ್ ಜನರಲ್ ಗೆ ವಕೀಲ ವಸಂತಕುಮಾರ್ ಮನವಿ ಮಾಡಿದ್ದಾರೆ.
ನ್ಯಾಯಾಲಯಗಳು ಸಹ ಕೇಂದ್ರ ಸರ್ಕಾರದ ಮಾತುಗಳನ್ನು ಕೇಳುವ ಸ್ಥಿತಿಗೆ ತಲುಪಿವೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದು, ಅವರ ವಿರುದ್ಧ ನ್ಯಾಯಾಂಗ ನಿಂದನೆ ದೂರು ಸಲ್ಲಿಸಲು ಅನುಮತಿ ನೀಡಬೇಕೆಂದು ಮನವಿ ಮಾಡಿದ್ದಾರೆ.
ನವೆಂಬರ್ 13ರಂದು ಹೆಚ್‍ಡಿ ಕೋಟೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಇಡಿ, ಸಿಬಿಐ, ಐಟಿ ಎಲ್ಲವೂ ಕೇಂದ್ರದ ಕೈಗೊಂಬೆಯಾಗಿವೆ ಎಂದು ಯತೀಂದ್ರ ಹೇಳಿದ್ದರು. ಇದು ನ್ಯಾಯಾಂಗದ ಸ್ವತಂತ್ರತೆಯನ್ನು ಪ್ರಶ್ನಿಸುವಂತಿದೆ. ಕಾರ್ಯಾಂಗದ ಪ್ರಭಾವದಡಿ ನ್ಯಾಯಾಂಗ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪ ಮಾಡಿದಂತಿದೆ. ಹೀಗಾಗಿ ಯತೀಂದ್ರ ವಿರುದ್ಧ ನ್ಯಾಯಾಂಗ ನಿಂದನೆ ದೂರು ಸಲ್ಲಿಸಲು ಅನುಮತಿ ನೀಡುವಂತೆ ಕೋರಿದ್ದಾರೆ.