ಮಾಜಿ ಕ್ರಿಕೆಟಿಗ, ಹಾಲಿ ರಾಜಕಾರಣಿ ನವಜೋತ್ ಸಿಂಗ್ ಸಿಧು ಇದೀಗ ಅತ್ಯಂತ ಸಂತಸದಲ್ಲಿದ್ದಾರೆ, ಅವರ ಪತ್ನಿ ಕ್ಯಾನ್ಸರ್ ಅನ್ನು ಮಣಿಸಿದ್ದು, ಅವರ ಖುಷಿಯನ್ನು ಇಮ್ಮಡಿಗೊಳಿಸಿದೆ. ನವಜೋತ್ ಅವರ ಪತ್ನಿ ನವಜೋತ್ ಕೌರ್ ಸಿಧು 4ನೇ ಹಂತದ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ವೈದ್ಯರು ಆಕೆ ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎಂದು ಘೋಷಿಸಿದ್ದರು. ಆದರೆ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ, ಕೇವಲ 40 ದಿನಗಳಲ್ಲಿ ಚೇತರಿಸಿಕೊಂಡಿದ್ದಾರೆ.
2022 ರಲ್ಲಿ ಸಿಧು 1988 ರ ರೋಡ್ ರೇಜ್ ಸಾವಿನ ಪ್ರಕರಣದಲ್ಲಿ ಒಂದು ವರ್ಷ ಶಿಕ್ಷೆಯನ್ನು ಅನುಭವಿಸಿದ್ದರು. ಇದೇ ಸಂದರ್ಭದಲ್ಲಿ ಅವರ ಪತ್ನಿ ನವಜೋತ್ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾದಾಗ ಆತಂಕಗೊಂಡಿದ್ದರು. ಪತಿ ಜೈಲಿನಲ್ಲಿದ್ದ ಹಿನ್ನಲೆಯಲ್ಲಿ ಪತ್ನಿ ಆರಂಭದಲ್ಲಿ ಈ ವಿಷಯವನ್ನು ಮರೆಮಾಚಿದ್ದರು. ಆದರೆ ಅಂತಿಮವಾಗಿ ಸಿದ್ದು ಅವರಿಗೆ ಈ ವಿಷಯ ಗೊತ್ತಾದಾಗ ಭೂಮಿಯೇ ಕುಸಿದಂತಾಗಿತ್ತು.
ಪತ್ನಿ ಕೀಮೋಥೆರಪಿ ಚಿಕಿತ್ಸೆಗೊಳಪಡುವ ಅನಿವಾರ್ಯತೆಗೊಳಗಾಗಿದ್ದು, ಇದರ ಮಧ್ಯೆಯೂ ಕ್ಯಾನ್ಸರ್ ಉಲ್ಬಣಗೊಳುತ್ತಿದ್ದ ಪರಿಣಾಮ ವೈದ್ಯರು ಆಕೆ ಇನ್ನು ಕೆಲ ವರ್ಷಗಳಷ್ಟೇ ಬದುಕಲು ಸಾಧ್ಯ ಎಂದಿದ್ದರು. ಆದರೆ ನವಜೋತ್ ಸಿಂಗ್ ಸಿಧು ಮತ್ತು ಅವರ ಪತ್ನಿ ಕಟ್ಟುನಿಟ್ಟಾದ ಆಹಾರಕ್ರಮವನ್ನು ಅಳವಡಿಸಿಕೊಂಡು ಮಾರಣಾಂತಿಕ ಕ್ಯಾನ್ಸರ್ ಮಣಿಸಿದ್ದಾರೆ.
ಸಕ್ಕರೆ ಕಡಿತಗೊಳಿಸಿ
ನವಜೋತ್ ಸಿಂಗ್ ಸಿಧು ಅವರು ಮೊದಲು ತಮ್ಮ ಪತ್ನಿಯ ಊಟದಿಂದ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಸಂಪೂರ್ಣವಾಗಿ ತೆಗೆದುಹಾಕಿದ್ದರು. ಜೊತೆಗೆ ಊಟದ ನಡುವೆ ಹೆಚ್ಚಿನ ಅಂತರವನ್ನು ಒದಗಿಸಿದ್ದು, ಇದು ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ ಎನ್ನಲಾಗಿದೆ.
ಮತ್ತೊಂದು ಪ್ರಮುಖ ಅಂಶವೆಂದರೆ ಮಧ್ಯಂತರ ಉಪವಾಸ. ಸೂರ್ಯಾಸ್ತದ ಕೊನೆಯ ಊಟವನ್ನು ಸುಮಾರು 6-6:30 PM ಅವಧಿಯಲ್ಲಿ ಕೊನೆಗೊಳಿಸುತ್ತಿದ್ದರು. ಬಳಿಕ ತಮ್ಮ ಮುಂದಿನ ಊಟವನ್ನು ಸುಮಾರು 15-15.5 ಗಂಟೆಗಳ ಬಳಿಕ ಸೇವಿಸಿದ್ದು, ಅಂದರೆ ಮರುದಿನ ಬೆಳಿಗ್ಗೆ ಸುಮಾರು 10 ಗಂಟೆಗೆ.
ಬೆಳಗಿನ ದಿನಚರಿ
ನವಜೋತ್ ಕೌರ್ ಸಿಧು ಬಳಿಕ ಬೆಳಿಗ್ಗೆ ತಮ್ಮ ದಿನಚರಿಯನ್ನು ಸುಣ್ಣದ ನೀರಿನಿಂದ ಪ್ರಾರಂಭಿಸಿದ್ದು, ಸುಮಾರು ಅರ್ಧ ಘಂಟೆಯ ನಂತರ, 10-12 ಬೇವಿನ ಎಲೆಗಳನ್ನು ಸೇವಿಸುತ್ತಿದ್ದರು.
ಈ ದಿನಚರಿಯನ್ನು ಅನುಸರಿಸಲು ಪ್ರಾರಂಭಿಸಿದ ನಂತರ ತಮ್ಮ ಪತ್ನಿ 4 ನೇ ಹಂತದ ಕ್ಯಾನ್ಸರ್ ನಿಂದ ಚೇತರಿಸಿಕೊಳ್ಳಲು ಕೇವಲ 40 ದಿನಗಳನ್ನು ತೆಗೆದುಕೊಂಡಿತು ಎಂದು ಮಾಜಿ ಭಾರತೀಯ ಕ್ರಿಕೆಟಿಗ ಹೇಳಿದ್ದಾರೆ. ಆಹಾರ ಸೇವನೆ ಕಾರಣಕ್ಕೆ ಅವರು 25 ಕೆಜಿ ತೂಕ ಕಳೆದುಕೊಳ್ಳಲು ಸಹಾಯ ಮಾಡಿದ್ದು, ಇದು ಕೊಬ್ಬಿನ ಯಕೃತ್ತನ್ನು ಕಡಿಮೆ ಮಾಡಲು ಸಹಾಯ ಮಾಡಿದೆ ಎನ್ನಲಾಗಿದೆ.
ಇದರ ಜೊತೆಗೆ ತೆಂಗಿನಕಾಯಿ ಹಾಲು ತಮ್ಮ ಪತ್ನಿಯ ಆರೋಗ್ಯ ಚೇತರಿಕೆಗೆ ಸಹಾಯ ಮಾಡಿದೆ ಎಂಬ ಸಂಗತಿಯನ್ನು ಅವರು ಹಂಚಿಕೊಂಡಿದ್ದಾರೆ. ತೆಂಗಿನ ಹಾಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಸೋಂಕಿನ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ ಎನ್ನಲಾಗಿದೆ.
My wife is clinically cancer free today ….. pic.twitter.com/x06lExML82
— Navjot Singh Sidhu (@sherryontopp) November 21, 2024