ಚಿತ್ರದುರ್ಗ: ಜಿಲ್ಲಾಸ್ಪತ್ರೆಯಲ್ಲಿ ಲಭ್ಯವಿರುವ ಎಬಿಆರ್ಕೆ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಕೋರಿದ್ದಾರೆ.
ಜಿಲ್ಲಾಸ್ಪತ್ರೆಗೆ ಬರುವಾಗ ರೋಗಿಗಳು ತಪ್ಪದೇ ಆಧಾರ್ ಕಾರ್ಡ್, ರೇಷನ್ ಕಾರ್ಡ್ ನಕಲು ಪ್ರತಿಗಳನ್ನು ತೆಗೆದುಕೊಂಡು ಬರಬೇಕು. ಒಳ ರೋಗಿಗಳಾಗಿ ದಾಖಲಾಗುವ ಸಂದರ್ಭದಲ್ಲಿ ತಪ್ಪದೇ ಎ.ಬಿ.ಆರ್.ಕೆ ಕೊಠಡಿಯಲ್ಲಿ ನೊಂದಣಿ ಮಾಡಿಸಬೇಕು. ಈ ಯೋಜನೆಯಡಿ ನೊಂದಣಿಯಾದ ಅರ್ಹ ಫಲಾನುಭವಿಗೆ ಜಿಲ್ಲಾಸ್ಪತ್ರೆಯಲ್ಲಿ ಲಭ್ಯವಿರುವ ರಕ್ತ ಪರೀಕ್ಷೆ, ಸಿ.ಟಿ.ಸ್ಕ್ಯಾನ್, ಎಕ್ಸ್-ರೇ, ಸ್ಕ್ಯಾನಿಂಗ್, ಆರ್ಥೋಇಂಪ್ಲಾಂಟ್, ಔಷಧಿ ಮತ್ತು ಮಾತ್ರೆಗಳನ್ನು ಉಚಿತವಾಗಿ ನೀಡಲಾಗುವ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ರೋಗಿಗಳು ಇತ್ತೀಚೆಗೆ ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ತದನಂತರ ರೆಫರೆಲ್ಗಾಗಿ ಇಲ್ಲಿನ ವೈದ್ಯಾಧಿಕಾರಿಗಳಿಗೆ ಒತ್ತಡ ತರುತ್ತಿದ್ದಾರೆ. ಆದ್ದರಿಂದ ಈ ರೀತಿ ಮಾಡದೇ ಮೊದಲು ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಿರಿ. ಒಂದು ವೇಳೆ ಚಿಕಿತ್ಸೆ ಲಭ್ಯವಿಲ್ಲದಿದ್ದಾಗ ಮಾತ್ರ ಎ.ಬಿ.ಆರ್.ಕೆ. ಅಡಿಯಲ್ಲಿ ರೆಫರೆಲ್ ಮಾಡಿಕೊಡಲಾಗುತ್ತದೆ.
ಹಾಗೆಯೇ ರೋಗಿಗಳು ಆಸ್ಪತ್ರೆಯಲ್ಲಿ ಯಾವುದೇ ಮಧ್ಯವರ್ತಿಗೆ ಹಣ ನೀಡಬೇಕಾಗಿಲ್ಲ. ಒಂದು ವೇಳೆ ಯಾರಾದರು ಹಣ ಕೇಳಿದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಎಸ್.ಪಿ.ರವೀಂದ್ರ ದೂರವಾಣಿ ಸಂಖ್ಯೆ 9448943163 ಗೆ ಸಂಪರ್ಕಿಸಿ ದೂರು ನೀಡಬಹುದು ಎಂದು ತಿಳಿಸಿದ್ದಾರೆ.