ಬೆಂಗಳೂರು: ರಾಜ್ಯಾದ್ಯಂತ ಜನಾಕ್ರೋಶ ತೀವ್ರಗೊಂಡ ಬೆನ್ನಲ್ಲೇ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಸ್ಥಗಿತಗೊಳಿಸಿದೆ. ಬಿಪಿಎಲ್ ಕಾರ್ಡ್ ವಿಚಾರ ಅಸ್ತ್ರವಾಗಿಟ್ಟುಕೊಂಡು ಬಿಜೆಪಿ ಹೋರಾಟ ನಡೆಸಿದೆ. ಇದನ್ನೇ ಪ್ರಬಲ ಅಸ್ತ್ರವನ್ನಾಗಿ ಮಾಡಿಕೊಂಡಿದೆ.
ಬಿಪಿಎಲ್ ಕಾರ್ಡ್ ಪರಿಷ್ಕರಣೆ ಸ್ಥಗಿತಗೊಳಿಸಿ ರದ್ದಾಗಿರುವ ಕಾರ್ಡ್ ಗಳಿಗೂ ರೇಷನ್ ವಿತರಿಸಲಾಗುವುದು ಎಂದು ಆಹಾರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಬಿಪಿಎಲ್ ಕಾರ್ಡ್ ಪರಿಷ್ಕರಿಸಲಾಗಿತ್ತು. ಆದರೆ, ಸದ್ಯಕ್ಕೆ ಪರಿಷ್ಕರಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಒಂದು ವೇಳೆ ಬಿಪಿಎಲ್ ಕಾರ್ಡ್ ವಿಚಾರದಲ್ಲಿ ಬಡವರಿಗೆ ತೊಂದರೆಯಾದಲ್ಲಿ ತಹಶೀಲ್ದಾರ್ ಗಮನಕ್ಕೆ ತಂದರೆ ಒಂದು ವಾರದೊಳಗಾಗಿ ಸಮಸ್ಯೆ ಬಗೆಹರಿಸಲಾಗುವುದು. ಅರ್ಹರಿಗೆ ಬಿಪಿಎಲ್ ತಪ್ಪಿ ಹೋಗಬಾರದು. ಆಕಸ್ಮಾತ್ ತಪ್ಪಿ ಹೋಗಿದ್ದರೆ ವಾಪಸ್ ಕೊಡಲಾಗುವುದು. ಹಾಗೆಯೇ ಪಡಿತರ ಚೀಟಿ ಇಲ್ಲವೆಂದು ಆರೋಗ್ಯ ಸೌಲಭ್ಯ ವಿಚಾರದಲ್ಲಿ ಯಾವುದೇ ತೊಂದರೆ ಆಗುವುದಿಲ್ಲ ಎಂದು ಸಚಿವ ಕೆ.ಎಚ್.ಮುನಿಯಪ್ಪ ಅವರು ತಿಳಿಸಿದ್ದಾರೆ.