ಡ್ರೀಮ್ ಡೀಲ್ ಕಂಪನಿಯ ಲಕ್ಕಿ ಡ್ರಾದಲ್ಲಿ ಸಿಬ್ಬಂದಿಯ ಮೋಸದಾಟದ ವಿಡಿಯೋ ವೈರಲ್ ಆಗಿತ್ತು. ಈ ಘಟನೆ ಬೆನ್ನಲ್ಲೇ ಎಚ್ಚೆತ್ತ ಸಂಸ್ಥೆ ಸ್ಪಷ್ಟನೆ ನೀಡಿದೆ.
ಮಂಗಳೂರಿನ ಭಾಗದಲ್ಲಿ ಪ್ರಮುಖವಾಗಿ ಕಾರ್ಯನಿರ್ವಹಿಸುತ್ತಿರುವ ಡ್ರೀಮ್ ಡೀಲ್ ಗ್ರೂಪ್ ತನ್ನ ಗ್ರಾಹಕರನ್ನು ಸೆಳೆಯಲು ಪ್ರತಿ ತಿಂಗಳು ಲಕ್ಕಿ ಡ್ರಾ ಮೂಲಕ ಬಹುಮಾನಗಳನ್ನು ಘೋಷಿಸುತ್ತದೆ. ಈ ಬಾರಿ ಮಹೀಂದ್ರ ಥಾರ್ ಬಹುಮಾನವಾಗಿ ಘೋಷಿಸಲಾಗಿತ್ತು. ಪ್ರತಿಬಾರಿ ಲಕ್ಕಿ ಡ್ರಾ ಕಾಯಿನ್ ಅಥವಾ ಚೀಟಿ ಎತ್ತುವಾಗ ನೇರ ಪ್ರಸಾರ ಮಾಡಲಾಗುತ್ತದೆ. ಈ ಬಾರಿ ಲಕ್ಕಿ ಡ್ರಾ ವೇಳೆ ಸಂಸ್ಥೆಯ ಸಿಬ್ಬಂದಿ ಮೋಸದಾಟ ಬಟಾಬಯಲಾಗಿತ್ತು. ಡ್ರಾ ವೇಳೆ ಸಿಬ್ಬಂದಿ ತನ್ನ ಕಿಸೆಯಿಂದ ತನಗೆ ಬೇಕಾದವರಿಗೆ ಕಾಯಿನ್ ಅಥವಾ ಚೀಟಿ ತೆಗೆದು ಲಕ್ಕಿ ಬಹುಮಾನ ಎತ್ತುವವನ ಕೈಗಿತ್ತು, ಕಾಯಿನ್ ಆಯ್ಕೆ ಮಾಡಿಸುತ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಇಂತಹ ಲಕ್ಕಿ ಡ್ರಾಗಳ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕು ಎಂಬ ಸಂದೇಶ ರವಾನೆಯಾಗಿತ್ತು. ಇದರ ಬೆನ್ನಲ್ಲೇ ಸಂಸ್ಥೆ ಸ್ಪಷ್ಟೀಕರಣ ನೀಡಿದೆ.
ಡ್ರೀಮ್ ಡೀಲ್ ಸಂಸ್ಥೆ ಡೈರೆಕ್ಟರ್ ಮೊಹಮ್ಮದ್ ಸುಹೈಲ್ ಇಂದು ಸುದ್ದಿಗೋಷ್ಠಿ ನಡೆಸಿ, ಡ್ರೀಮ್ ಡೀಲ್ ವತಿಯಿಂದ ಪ್ರತಿ ತಿಂಗಳು ಪ್ರಮೋಷನ್ ಗಾಗಿ ಲಕ್ಕಿ ಡ್ರಾ ಮೂಲಕ ಗಿಫ್ಟ್ ನೀಡುತ್ತೇವೆ. ನಿನ್ನೆ ನಡೆದ ಲಕ್ಕಿ ಡ್ರಾ ಸಂದರ್ಭದಲ್ಲಿ ಉಬೈದ್ ಹಾಗೂ ಹರ್ಷಿತ್ ಎನ್ನುವ ನಮ್ಮ ಕೆಲಸದವರು ಸಂಸ್ಥೆಗೆ ಮೋಸ ಮಾಡಿದ್ದಾರೆ. ಈ ವಿಷಯ ಗಮನಕ್ಕೆ ಬಂದ ತಕ್ಷಣ ಮರು ಡ್ರಾ ಮಾಡಿದ್ದೇವೆ. ಬಳಿಕ ಅವರ ವಿರುದ್ಧ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ ಎಂದು ವಿವರಿಸಿದ್ದಾರೆ.
ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಡ್ರೀಮ್ ಡೀಲ್ ಕಂಪನಿ ಇನ್ನುಮುಂದೆಯೂ ಜನರ ವಿಶ್ವಾಸಕ್ಕೆ ಬದ್ಧವಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಡ್ರೀಮ್ ಡೀಲ್ ಸಂಸ್ಥೆ ಆರ್ ಬಿಐ ನಿಯಮಗಳ ಅನ್ವಯ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯದಲ್ಲಿ 15,000ಕ್ಕೂ ಅಧಿಕ ಗ್ರಾಹಕರಿದ್ದಾರೆ. ಗ್ರಾಹಕರು ಪ್ರತಿ ತಿಂಗಳು 1000 ರೂ ಪಾವತಿ ಮಾಡಿದರೆ ಅವರಿಗೆ ಕೂಪನ್ ನೀಡಲಾಗುತ್ತದೆ. ಅದರಲ್ಲಿ ಅವರು ನಮ್ಮ ಇ-ಕಾಮರ್ಸ್ ವೆಬ್ ಸೈಟ್ ನಿಂದ ಸಾಮಗ್ರಿ ಖರೀದಿಸಬಹುದು. ಇದೇ ವೇಳೆ ಈ ಗ್ರಾಹಕರಿಗೆ ಲಕ್ಕಿ ಡ್ರಾ ಮೂಲಕ ಬಹುಮಾನ ನೀಡಲಾಗುತ್ತದೆ. ಆಯ್ಕೆಯಾದ ಗ್ರಾಹಕರಿಗೆ ಮಹೀಂದ್ರಾ ಥಾರ್ ನಂತಹ ಮತ್ತಿತರ ಕೊಡುಗೆಗಳನ್ನು ಸಂಸ್ಥೆ ನೀಡುತ್ತಾ ಬಂದಿದೆ. ಈ ಬಾರಿ ಡ್ರಾದಲ್ಲಿ ಯೂಟ್ಯೂಬ್ ಲೈವ್ ಇದ್ದರೂ ಸಂಸ್ಥೆಯ ಇಬ್ಬರು ಸುಬ್ಬಂದಿಗಳು ಬೇರೊಂದು ಚೀಟಿಯನ್ನು ಉದ್ದೇಶಪೂರ್ವಕವಾಗಿ ಅದರಲ್ಲಿ ಹಾಕಿದ್ದಾರೆ. ಆದರೆ ಅವರು ಅದರಲ್ಲಿ ಯಶಸ್ಸು ಕಾಣಲಿಲ್ಲ. ಬಾಕ್ಸ್ ಅಲ್ಲಿ ಕೈ ಹಾಕುತ್ತಿದ್ದಂತೆ ಅವರ ಕೈಲಿದ್ದ ಚೀಟಿ ಬಾಕ್ಸ್ ನಲ್ಲಿದ್ದ ನಂಬರ್ ರಾಶಿಗೆ ಬಿದ್ದಿದೆ. ಈ ವಂಚನೆ ಕಂಡುಬಂದ ತಕ್ಷಣ ನಾವು ಇನ್ನೊಂದು ಡ್ರಾ ಮಾಡಿದ್ದೇವೆ. ಗ್ರಾಹಕರ ಹಿತದೃಷ್ಟಿಯಿಂದ ಇಬ್ಬರಿಗೆ ಬಹುಮಾನ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ರಾಜ್ಯಾದ್ಯಂತ ಡ್ರೀಮ್ ಡ್ರೀಲ್ ಗ್ರೂಪ್ ನ 15ಕ್ಕೂ ಹೆಚ್ಚು ಬ್ರಾಂಚ್ ಗಳು ಕಾರ್ಯನಿರ್ವಹಿಸುತ್ತಿದ್ದು, ಎಲ್ಲೆಡೆ ಗ್ರಾಹಕ ಸ್ನೇಹಿಯಾಗಿ ಸಂಸ್ಥೆ ಹಾಗೂ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ನಡೆದ ಘಟನೆಯಲ್ಲಿ ಸಂಸ್ಥೆ ಭಾಗಿಯಾಗಿಲ್ಲ. ತಪ್ಪಿತಸ್ಥ ಕೆಲಸಗಾರರನ್ನು ಕೆಲಸದಿಂದ ತೆಗೆದು ಹಾಕಲಾಗಿದ್ದು, ಕಾನೂನು ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದ್ದಾರೆ.