ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗಿದೆ. ಎಲ್ಲಾ 288 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಮತದಾರರು ಉತ್ಸಾಹದಲ್ಲಿ ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ಈ ನಡುವೆ ಮತದಾರರಿಗೆ ಹಣ ಹಂಚಿಕೆ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ವಿರುದ್ಧ ಎರಡು ಎಫ್ಐಆರ್ ದಾಖಲಾಗಿದೆ.
ಚುನಾವಣೆಗೆ ಕೆಲವೇ ಗಂಟೆಗಳ ಮೊದಲು ಪಾಲ್ಘರ್ ನ ಹೋಟೆಲ್ ನಲ್ಲಿ ವಿನೋದ್ ತಾವ್ಡೆ ಹಣ ಹಂಚಿತ್ತಿರುವ ಬಗ್ಗೆ ಆರೋಪ ಕೇಳಿಬಂದಿತ್ತು. ಬಹುಜನ ವಿಕಾಸ್ ಅಘಾಡಿ ಪಕ್ಷದ ಕಾರ್ಯಕರ್ತರು ಹೋಟೆಲ್ ಮೇಲೆ ದಾಳಿ ನಡೆಸಿದ್ದರು. ಈ ವೇಳೆ 5 ಕೋಟಿ ಹಣ ಹಂಚಿಕೆ ಮಾಡುತ್ತಿರುವ ಬಗ್ಗೆ ಆರೋಪಿಸಿದ್ದರು.
ಪ್ರಕರಣ ಸಂಬಂಧ ವಿನೋದ್ ತಾವ್ಡೆ ವಿರುದ್ಧ ನಿನ್ನೆ ಎಫ್ಐಆರ್ ದಾಖಲಾಗಿತ್ತು. ಇದೀಗ ಈ ಪ್ರಕರಣ ಸಂಬಂಧ ವಿನೋದ್ ತಾವ್ಡೆ ಹಾಗೂ ಬಿಜೆಪಿ ಅಭ್ಯರ್ಥಿ ರಾಜನ್ ನಾಯಕ್ ಹಾಗೂ ಇತರ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಎರಡು ಎಫ್ಐಆರ್ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.