ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ವಿವಿಧ ಕಂಪನಿಗಳು, ಶೋ ರೂಂ, ಮಾಲ್ ಗಳು ಲಕ್ಕಿ ಕೂಪನ್ ಡ್ರಾ ಏರ್ಪಡಿಸುವುದನ್ನು ನೋಡಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರು ಇಂತಹ ಲಕ್ಕಿ ಡ್ರಾ ಹೆಸರಲ್ಲಿ ಗ್ರಾಹಕರಿಗೆ ನೇರಾ ನೇರವಾಗಿ ಮೋಸ ಮಾಡಿ ವಂಚಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇಂತದ್ದೇ ವಂಚನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಇಂತಹ ಲಕ್ಕಿ ಡ್ರಾಗಳಿಗೆ ಮರುಳಾಗದಂತೆ ಎಚ್ಚರವಹಿಸುವುದು ಮುಖ್ಯ,
ಲಕ್ಕಿ ಡ್ರಾನಲ್ಲಿ ಅದೃಷ್ಟವಂತ ಗ್ರಾಹಕರನ್ನು ಆಯ್ಕೆ ಮಾಡುವ ನೆಪದಲ್ಲಿ ಗ್ರಾಹಕರ ಎದುರಲ್ಲೇ ಯಾವೆಲ್ಲ ರೀತಿ ಮೋಸದಾಟವಾಡುತ್ತಾರೆ ಎಂಬುದಕ್ಕೆ ಡ್ರೀಮ್ ಡೀಲ್ ಗ್ರೂಪ್ ನ ಲಕ್ಕಿ ಡ್ರಾ ಆಯ್ಕೆಯ ಈ ವಿಡಿಯೋ ಸಾಕ್ಷಿ.
ಡ್ರೀಮ್ ಡೀಲ್ ಗ್ರೂಪ್ ಎಂಬ ಹೆಸರನ ಕಂಪನಿ ಅದೃಷ್ಟವಂತ ಗ್ರಾಹಕರ ಆಯ್ಕೆ ಕಾರ್ಯಕ್ರಮದಲ್ಲಿ ಕಂಪನಿಯ ಸಿಬ್ಬಂದಿ ಇನ್ನೋರ್ವ ವ್ಯಕ್ತಿಗೆ ಕಣ್ಣಿಗೆ ಬಟ್ಟೆ ಕಟ್ಟಿ ಅಕ್ವೇರಿಯಂ ಮಾದರಿಯ ನೀರಿನ ಬಾಕ್ಸ್ ನಲ್ಲಿ ಲಕ್ಕಿ ಚೀಟಿ ಎತ್ತಲು ಹೇಳುತ್ತಾನೆ. ಹೀಗೆ ಕಣ್ಣಿಗೆ ಬಟ್ಟೆ ಕಟ್ಟಿ ನೀರಿನ ಬಾಕ್ಸ್ ಗೆ ಕೈ ಇಡುವ ಮೊದಲು ಸಿಬ್ಬಂದಿ ತನ್ನ ಪ್ಯಾಂಟ್ ಜೇಬ್ ನಿಂದ ಚೀಟಿಯೊಂದನ್ನು ಆತನ ಕೈಗಿಟ್ಟಿರುತ್ತಾನೆ. ಕಣ್ಣಿಗೆ ಬಟ್ಟೆಕಟ್ಟಿಕೊಂಡಿರುವಾತ ತನ್ನಕೈಯಲ್ಲಿ ಯಾವುದೇ ಚೀಟಿ ಇಲ್ಲದವನಂತೆ ನಟಿಸುತ್ತಾ ನೀರಿನ ಬಾಕ್ಸ್ ನಲ್ಲಿ ಕೈಯಾಡಿಸಿ ಅದೇ ಹೆಸರು ಅಥವಾ ನಂಬರ್ ನ ಚೀಟಿ ಹೊರತೆಗೆಯುತ್ತಾನೆ. ಈ ಮೂಲಕ ಸಿಬ್ಬಂದಿ ತನಗೆ ಬೇಕಾದವರ ಅಥವಾ ತನ್ನ ಪರಿಚಯಸ್ಥರ ಹೆಸರಿಗೆ ಲಕ್ಕಿ ಚೀಟಿ ಎತ್ತುವಂತೆ ಮೊದಲೇ ಟೈಯಪ್ ಆಗಿರುತ್ತಾನೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ಲಕ್ಕಿ ಡ್ರಾ ಹೆಸರಲ್ಲಿ ಗ್ರಾಹಕರ ಕಣ್ಣೆದುರೇ ಹೇಗೆ ಮೋಸ ನಡೆಯುತ್ತೆ ಎಂಬುದನ್ನು ಸ್ಪಷ್ಟವಾಗಿ ಚಿತ್ರಿಸುವಂತಿದೆ.