ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಕಬ್ಬಿನಾಲೆಯ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಿಗ್ರಹದಳ(ANF) ನಡೆಸಿದ ಎನ್ಕೌಂಟರ್ ನಲ್ಲಿ ಕಬ್ಬಿನಾಲೆ ಮೂಲದ ನಕ್ಸಲ್ ನಾಯಕ ವಿಕ್ರಂ ಗೌಡ ಸಾವನ್ನಪ್ಪಿದ್ದಾರೆ.
ಅರಣ್ಯ ಪ್ರದೇಶದಲ್ಲಿ ಎಎನ್ಎಫ್ ಮತ್ತು ನಕ್ಸಲರ ತಂಡಗಳು ಮುಖಾಮುಖಿಯಾಗಿದ್ದು, ಈ ವೇಳೆ ನೇತ್ರಾವತಿ ದಳದ ನಕ್ಸಲ್ ನಾಯಕ ವಿಕ್ರಂ ಗೌಡರ ಎನ್ ಕೌಂಟರ್ ಮಾಡಲಾಗಿದೆ. ಹೆಬ್ರಿ ತಾಲೂಕಿನಲ್ಲಿ ನಕ್ಸಲ್ ಚಟುವಟಿಕೆ ಹಿನ್ನಲೆ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದ ಎಎನ್ಎಫ್ ತಂಡಕ್ಕೆ ನಕ್ಸಲರ ತಂಡ ಮುಖಾಮುಖಿಯಾಗಿದೆ. ಈ ವೇಳೆ ನಕ್ಸಲ್ ಮುಖಂಡನ ಮೇಲೆ ಎಎನ್ಎಫ್ ಪೊಲೀಸರು ಫೈರಿಂಗ್ ಮಾಡಿದ್ದು, ಉಳಿದ ಮೂವರು ಪರಾರಿಯಾಗಿದ್ದಾರೆ. ಫೈರಿಂಗ್ ನಲ್ಲಿ ಕಬ್ಬಿನಾಲೆ ಮೂಲದ ನಕ್ಸಲ್ ನಾಯಕ ವಿಕ್ರಂ ಗೌಡನನ್ನು ಹತ್ಯೆ ಮಾಡಲಾಗಿದ್ದು, ಫೈರಿಂಗ್ ವೇಳೆ ಪರಾರಿಯಾದ ಮೂವರು ನಕ್ಸಲರಿಗಾಗಿ ಶೋಧ ಮುಂದುವರಿಸಲಾಗಿದೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಹೋರಾಟ ಸಂದರ್ಭದಲ್ಲಿ ನಕ್ಸಲ್ ಚಳವಳಿಗೆ ಧುಮುಕಿದ್ದ ವಿಕ್ರಂ ಗೌಡ ಕರಾವಳಿಯಲ್ಲಿ ನೇತ್ರಾವತಿ ನಕ್ಸಲ್ ತಂಡದ ನಾಯಕರಾಗಿದ್ದರು. ನಕ್ಸಲ್ ನಾಯಕರಾಗಿದ್ದ ಸಾಕೇತ್ ರಾಜನ್ ಅವರಿಂದ ಪ್ರಭಾವಕ್ಕೆ ಒಳಗಾಗಿ ಈತ ಹೋರಾಟದಲ್ಲಿ ತೊಡಗಿಕೊಂಡಿದ್ದರು. ಮಲೆನಾಡು ಭಾಗದಲ್ಲಿ ಮುಂಡಗಾರು ಲತಾ ಟೀಂ ಸಕ್ರಿಯವಾಗಿತ್ತು. ಕರಾವಳಿ ಭಾಗದಲ್ಲಿ ವಿಕ್ರಂ ಗೌಡ ಕಾರ್ಯಾಚರಣೆ ನಡೆಸುತ್ತಿದ್ದು, ಕೇರಳದಿಂದ ಎರಡು ತಿಂಗಳ ಹಿಂದೆ ಕರ್ನಾಟಕಕ್ಕೆ ಆಗಮಿಸಿದ್ದರು.
ಚಿಕ್ಕಮಗಳೂರು, ಉಡುಪಿ ಭಾಗದಲ್ಲಿ ಸಭೆ ನಡೆಸುತ್ತಿದ್ದರು. ಕಸ್ತೂರಿ ರಂಗನ್ ವರದಿ, ಅರಣ್ಯ ಒತ್ತುವರಿ ತೆರವು ವಿಚಾರಗಳ ಬಗ್ಗೆ ಗ್ರಾಮಸ್ಥರೊಂದಿಗೆ ಸಭೆ ನಡೆಸುತ್ತಿದ್ದರು. ಗ್ರಾಮಗಳಿಗೆ ಒಂಟಿ ಮನೆಗಳಿಗೆ ತೆರಳಿ ಅಗತ್ಯ ಸಾಮಗ್ರಿ ಸಂಗ್ರಹಿಸುತ್ತಿದ್ದರು, ಈ ಬಗ್ಗೆ ಮಾಹಿತಿ ಪಡೆದು ಕೂಂಬಿಂಗ್ ಆರಂಭಿಸಲಾಗಿತ್ತು.
ಅಂದ ಹಾಗೆ ನಕ್ಸಲ್ ನಾಯಕ ವಿಕ್ರಂ ಗೌಡನ ವಿರುದ್ಧ ಹಲವು ಕೇಸುಗಳು ದಾಖಲಾಗಿದ್ದವು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಹೋರಾಟದ ವೇಳೆ ನಕ್ಸಲ್ ಚಳವಳಿಗೆ ಧುಮುಕಿದ ವಿಕ್ರಂ ಗೌಡ ಕೇರಳದಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು. ಕಸ್ತೂರಿ ರಂಗನ್ ವರದಿ ಸೇರಿ ಹಲವು ವಿಚಾರಗಗಳೊಂದಿಗೆ ಹೋರಾಟಕ್ಕೆ ಸಂಘಟನೆ ಮಾಡುತ್ತಿದ್ದರು ಎನ್ನಲಾಗಿದೆ.
ವಿಕ್ರಂ ಗೌಡ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕನಾಗಿದ್ದು, ಈತನ ತಲೆಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಕರ್ನಾಟಕ, ಕೇರಳ, ತಮಿಳುನಾಡು ಪೊಲೀಸರಿಗೆ ಈತ ಬೇಕಾಗಿದ್ದ. ವಿಕ್ರಂ ಗೌಡನ ನಕ್ಸಲ್ ಚಟುವಟಿಕೆ ಸಂಬಂಧ ಹಲವು ಕೆಲಸಗಳು ದಾಖಲಾಗಿದ್ದವು. ಕೇರಳದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ತೀವ್ರಗೊಂಡ ಹಿನ್ನೆಲೆಯಲ್ಲಿ ಈತ ಕರ್ನಾಟಕಕ್ಕೆ ಆಗಮಿಸಿದ್ದ.
ಇದೀಗ ಎನ್ ಕೌಂಟರ್ ನಲ್ಲಿ ಮೃತಪಟ್ಟಿದ್ದು, 13 ವರ್ಷಗಳ ನಂತರ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮೊದಲ ಎನ್ಕೌಂಟರ್ ನಡೆದಿದೆ. ಕೇರಳದಿಂದ ಎರಡು ತಿಂಗಳ ಹಿಂದೆ ಬಂದಿದ್ದ ಇವರು ಚಿಕ್ಕಮಗಳೂರು ಮತ್ತು ಉಡುಪಿ ಭಾಗದಲ್ಲಿ ಸಭೆ ನಡೆಸುತ್ತಿದ್ದರು.
ಚಿಕ್ಕಮಗಳೂರು -ಉಡುಪಿ ಗಡಿ ಭಾಗದಲ್ಲಿ ಇತ್ತೀಚೆಗಷ್ಟೇ ನಕ್ಸಲರ ಚಲನವಲನ ಕಾಣಿಸಿಕೊಂಡಿದ್ದು, ಕೂಂಬಿಂಗ್ ಕಾರ್ಯಾಚರಣೆಯನ್ನು ಪೊಲೀಸರು ಹಾಗೂ ಎಎನ್ಎಫ್ ತಂಡ ತೀವ್ರಗೊಳಿಸಿತ್ತು.