ಪಟಾಣ್: ಗುಜರಾತ್‌ನ ಪಟಾನ್ ಜಿಲ್ಲೆಯ ಜಿಎಂಇಆರ್‌ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ 18 ವರ್ಷದ ವಿದ್ಯಾರ್ಥಿಯೊಬ್ಬರು ರ್ಯಾಗಿಂಗ್ ಗೆ ಒಳಗಾಗಿ ಸಾವನ್ನಪ್ಪಿದ್ದಾರೆ. ಕಾರಣರಾದ 15 ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಶನಿವಾರ ರಾತ್ರಿ ಈ ದಾರುಣ ಘಟನೆ ನಡೆದಿದೆ. ಸುರೇಂದ್ರನಗರದ 18 ವರ್ಷದ ವಿದ್ಯಾರ್ಥಿ ಹಿರಿಯರಿಂದ 3 ಗಂಟೆಗಳ ರ್ಯಾಗಿಂಗ್ ಗೆ ಒಳಗಾದ ನಂತರ ಕುಸಿದು ಬಿದ್ದಿದ್ದಾನೆ. ಅವನ ಸ್ಥಿತಿಯು ಶೀಘ್ರವಾಗಿ ಹದಗೆಟ್ಟಿದ್ದು, ಪ್ರಜ್ಞೆ ಕಳೆದುಕೊಂಡಿದ್ದಾನೆ. ಅವರ ಸ್ನೇಹಿತರು ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಧಾವಿಸಲು ಪ್ರಯತ್ನಿಸಿದರೂ, ವೈದ್ಯರು ನಂತರ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ.
ಕುಟುಂಬ ಸದಸ್ಯರ ಪ್ರಕಾರ, 18 ವರ್ಷದ ಅನಿಲ್ ಭಾಯಿ ನಟವರ್ ಭಾಯ್ ಮೆಥಾನಿಯಾ ತನ್ನ ವೈದ್ಯಕೀಯ ಅಧ್ಯಯನ ಮುಂದುವರೆಸಲು ಒಂದು ತಿಂಗಳ ಹಿಂದೆ ಪಟಾನ್ ನ ಧರ್ಪುರ್ ವೈದ್ಯಕೀಯ ಕಾಲೇಜಿಗೆ ಸೇರಿದ್ದ. ನವೆಂಬರ್ 16 ರ ಶನಿವಾರ ರಾತ್ರಿ 8:30 ರ ಸುಮಾರಿಗೆ, ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳನ್ನು ವಿವಿಧ ಕೊಠಡಿಗಳಿಗೆ ರ್ಯಾಗಿಂಗ್ ಮಾಡಲು ಕರೆದಿದ್ದಾರೆ. ಗುರಿಯಾದವರಲ್ಲಿ ಅನಿಲ್ ಕೂಡ ಇದ್ದಾನೆ.
ಆರೋಪಿಗಳೆಲ್ಲರೂ ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು. ಸಂತ್ರಸ್ತ ಸೇರಿದಂತೆ ಕೆಲವು ಜೂನಿಯರ್‌ಗಳನ್ನು ಶನಿವಾರ ರಾತ್ರಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ಹಾಸ್ಟೆಲ್ ಕೋಣೆಯಲ್ಲಿ ನಿಲ್ಲಿಸಿ ಮಾನಸಿಕ ಮತ್ತು ದೈಹಿಕ ಚಿತ್ರಹಿಂಸೆಗೆ ಒಳಪಡಿಸಿದ್ದಾರೆ ಎಂದು ಪ್ರಥಮ ಮಾಹಿತಿ ವರದಿಯಲ್ಲಿ ತಿಳಿಸಲಾಗಿದೆ. ಅವರ ವಿರುದ್ಧ ಅಪರಾಧಿ ನರಹತ್ಯೆ ಮತ್ತು ಇತರ ಅಪರಾಧಗಳಿಗೆ ಸಂಬಂಧಿಸಿದ ಮೊಕದ್ದಮೆ ದಾಖಲಿಸಲಾಗಿದೆ ಎಂದು ಎಫ್‌ಐಆರ್ ತಿಳಿಸಿದೆ.
ಮುಂದಿನ ಆದೇಶದವರೆಗೆ ಆರೋಪಿ ವಿದ್ಯಾರ್ಥಿಗಳನ್ನು ಹಾಸ್ಟೆಲ್ ಮತ್ತು ಶೈಕ್ಷಣಿಕ ಚಟುವಟಿಕೆಗಳಿಂದ ಅಮಾನತುಗೊಳಿಸಲಾಗಿದೆ ಎಂದು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.