ಬೆಂಗಳೂರು: ಮದ್ಯ ಮಾರಾಟ ವ್ಯಾಪಾರಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಫೆಡರೇಶನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ನವೆಂಬರ್ 20ರಂದು ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್ ಗೆ ಕರೆ ನೀಡಿದೆ. ಈ ಮೂಲಕ ಸ್ವಚ್ಛ ಅಬಕಾರಿ ಅಭಿಯಾನದ ಎರಡನೇ ಹಂತದ ಹೋರಾಟ ಕೈಗೊಂಡಿದೆ.
ಅಬಕಾರಿ ಉದ್ಯಮಕ್ಕೆ ಬೆಂಕಿ ಬಿದ್ದಿದೆ. ಸುಮಾರು ವರ್ಷಗಳಿಂದ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಎಲ್ಲಾ ಸರ್ಕಾರಗಳ ಅವಧಿಯಲ್ಲಿ ವರ್ಗಾವಣೆ, ಬಡ್ತಿಗೆ ಅಬಕಾರಿ ಸಚಿವರು, ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಲಂಚ ನೀಡಿ ವರ್ಗಾವಣೆ, ಬಡ್ತಿ ಪಡೆದ ಅಧಿಕಾರಿಗಳು ಮದ್ಯ ಮಾರಾಟಗಾರರಿಂದ ಸುಲಿಗೆ ಮಾಡುತ್ತಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಗೋವಿಂದರಾಜ ಹೆಗ್ಡೆ ಆರೋಪಿಸಿದ್ದಾರೆ.
ಅನೇಕ ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಎರಡನೇ ಹಂತದ ಪ್ರತಿಭಟನೆಗೆ ಮುಂದಾಗಿದ್ದೇವೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಅಬಕಾರಿ ಸಚಿವರು, ಆರ್ಥಿಕ ಇಲಾಖೆ, ಪೊಲೀಸ್, ಅಬಕಾರಿ ಇಲಾಖೆಯ ಸಭೆ ನಡೆಸಿ ಮದ್ಯ ಮಾರಾಟಗಾರರ ಬೇಡಿಕೆ ಮತ್ತು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಆರ್ಥಿಕ ಇಲಾಖೆ ಜವಾಬ್ದಾರಿ ಹೊಂದಿರುವ ಮುಖ್ಯಮಂತ್ರಿಗಳೇ ಅಬಕಾರಿ ಇಲಾಖೆಯ ಉಸ್ತುವಾರಿ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.