alex Certify ಗ್ಯಾರಂಟಿ ಜಾರಿ ಬಗ್ಗೆ ಅನುಮಾನವಿದ್ರೆ ಕರ್ನಾಟಕಕ್ಕೆ ಬಂದು ಪರೀಕ್ಷಿಸಿ: ಮಹಾರಾಷ್ಟ್ರ ಬಿಜೆಪಿ ನಾಯಕರಿಗೆ ಸಿದ್ಧರಾಮಯ್ಯ ಸವಾಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ಯಾರಂಟಿ ಜಾರಿ ಬಗ್ಗೆ ಅನುಮಾನವಿದ್ರೆ ಕರ್ನಾಟಕಕ್ಕೆ ಬಂದು ಪರೀಕ್ಷಿಸಿ: ಮಹಾರಾಷ್ಟ್ರ ಬಿಜೆಪಿ ನಾಯಕರಿಗೆ ಸಿದ್ಧರಾಮಯ್ಯ ಸವಾಲ್

ಮುಂಬೈ: ಕರ್ನಾಟಕ ರಾಜ್ಯದಲ್ಲಿ ನಮ್ಮ ಸರ್ಕಾರ ಐದಕ್ಕೆ ಐದೂ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ, ರಾಜ್ಯದ ಜನರ ಮನೆ ಮನೆಗೆ ತಲುಪಿಸಿದೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ

ಮಹಾರಾಷ್ಟ್ರದ ನಾನಾ ಕಡೆ ಚುನಾವಣಾ ಪ್ರಚಾರ ನಡೆಸಿ, ಬಳಿಕ ಸೋಲಾಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಶಕ್ತಿ ಯೋಜನೆ: ಇಲ್ಲಿಯವರೆಗೂ ಈ ಗ್ಯಾರಂಟಿಯಿಂದ 325 ಕೋಟಿ ಬಾರಿ ಮಹಿಳೆಯರು ಉಚಿತವಾಗಿ ಬಸ್ ಗಳಲ್ಲಿ ಪ್ರಯಾಣಿಸಿದ್ದಾರೆ.

ಗೃಹಜ್ಯೋತಿ: 1 ಕೋಟಿ 62 ಲಕ್ಷ ಕುಟುಂಬಗಳು 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ.

ಅನ್ನಭಾಗ್ಯ: ಒಂದು ಕೋಟಿ 20 ಲಕ್ಷ ಕುಟುಂಬಗಳು ಐದು ಕೆಜಿ ಉಚಿತ ಅಕ್ಕಿ ಜೊತೆಗೆ ಐದು ಕೆಜಿ ಅಕ್ಕಿಯ ಬಾಬ್ತು 170 ರೂಪಾಯಿಗಳನ್ನು ತಲಾ ಪಡೆಯುತ್ತಿದ್ದಾರೆ

ಗೃಹಲಕ್ಷ್ಮಿ: ಒಂದು ಕೋಟಿ 22 ಲಕ್ಷ ಕುಟುಂಬಗಳ ಯಜಮಾನಿಯರು ಪ್ರತಿ ತಿಂಗಳು 2,000 ರೂ. ಗೃಹಲಕ್ಷ್ಮಿ ಹಣ ಪಡೆಯುತ್ತಿದ್ದಾರೆ. ಹೆಚ್ಚೂ ಕಡಿಮೆ ಈ ಗ್ಯಾರಂಟಿಯಿಂದ ಪ್ರತೀ ವರ್ಷ 30 ಸಾವಿರ ಕೋಟಿ ರೂಪಾಯಿ ಹಣ ಮನೆ ಯಜಮಾನಿಯರ ಖಾತೆಗೆ ನೇರವಾಗಿ ಜಮೆ ಆಗುತ್ತಿದೆ.

ಯುವನಿಧಿ: ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲೊಮೋ ಹೊಂದಿರುವವರು ಯುವನಿಧಿ ಅಡಿಯಲ್ಲಿ ಭತ್ಯೆ ಪಡೆಯುತ್ತಿದ್ದಾರೆ.

ಮಹಾರಾಷ್ಟ್ರ ಬಿಜೆಪಿ ಮುಖಂಡರು ಮತ್ತು ಬಿಜೆಪಿಯ ಮಂತ್ರಿಗಳು ಕರ್ನಾಟಕಕ್ಕೆ ಬಂದು ಪರೀಕ್ಷಿಸಲಿ. ನಾನು ನೀಡಿರುವ ಲೆಕ್ಕ ಸುಳ್ಳಾದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ತೇನೆ. ನಿಜ ಆಗಿದ್ರೆ ನೀವು ಮಹಾರಾಷ್ಟ್ರ ಜನತೆಯ ಕ್ಷಮೆ ಕೋರಿ ರಾಜಕೀಯ ನಿವೃತ್ತಿ ಘೋಷಿಸ್ತೀರಾ ಎಂದು ಸವಾಲ್ ಹಾಕಿದ್ದಾರೆ.

ಕರ್ನಾಟಕ ಪ್ರತೀ ವರ್ಷ 4 ಲಕ್ಷದ 50 ಸಾವಿರ ಕೋಟಿ ರೂ. ನಷ್ಟು ತೆರಿಗೆಯನ್ನು ಪಾವತಿಸಿದರೆ ವಾಪಾಸ್ ರಾಜ್ಯಕ್ಕೆ ಬರುತ್ತಿರುವುದು 60 ಸಾವಿರ ಕೋಟಿ ರೂ. ಮಾತ್ರ.

ಮಹಾರಾಷ್ಟ್ರ ರಾಜ್ಯ ಪ್ರತೀ ವರ್ಷ 8 ಲಕ್ಷದ 78 ಸಾವಿರ ಕೋಟಿ ರೂಪಾಯಿ ತೆರಿಗೆ ಕಟ್ಟಿದರೆ ವಾಪಾಸ್ ಬರುತ್ತಿರುವುದು 1 ಲಕ್ಷದ 30 ಸಾವಿರ ಕೋಟಿ ರೂ. ಮಾತ್ರ.

ಹೀಗಾಗಿ ಮಹಾರಾಷ್ಟ್ರ ಕಟ್ಟುವ ಪ್ರತೀ ಒಂದು ರೂಪಾಯಿ ತೆರಿಗೆಯಲ್ಲಿ 15 ಪೈಸೆಯಷ್ಟನ್ನು, ಕರ್ನಾಟಕ 13 ಪೈಸೆಯಷ್ಟನ್ನು ಮಾತ್ರ ವಾಪಾಸ್ ಪಡೆಯುತ್ತಿದೆ. ಕೇಂದ್ರದ ಮೋದಿ ಸರ್ಕಾರ ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳಿಗೂ ಅನ್ಯಾಯ ಮಾಡುತ್ತಿದೆ. ಈ ಅನ್ಯಾಯದ ವಿರುದ್ಧ ಜಿತೆಗೂಡಿ ಧ್ವನಿಯೆತ್ತೋಣ ಎಂದು ಹೇಳಿದ್ದಾರೆ.

ಗ್ಯಾರಂಟಿಗಳ ಜಾರಿಯಿಂದ ದೇಶದ ಆರ್ಥಿಕತೆ ನಾಶವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡಿದ್ದಾರೆ. ಆದರೆ, ಇದೇ ಬಿಜೆಪಿ ಮಹಾರಾಷ್ಟ್ರ, ಮಧ್ಯಪ್ರದೇಶ ಚುನಾವಣೆಯಲ್ಲಿ ಗ್ಯಾರಂಟಿಗಳನ್ನು ಘೋಷಿಸಿತ್ತು. ಮೋದಿ ಯಾಕೆ ಈ ಮಟ್ಟದ ಸುಳ್ಳು ಹೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಜಾತಿ, ಎಲ್ಲಾ ಧರ್ಮ, ಎಲ್ಲಾ ವರ್ಗದವರೂ ನಮ್ಮ ಗ್ಯಾರಂಟಿಗಳ ಅನುಕೂಲ ಪಡೆಯುತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರ ಸಾಮಾಜಿಕವಾಗಿ, ಆರ್ಥಿಕವಾಗಿ ದೊಡ್ಡ ರಾಜ್ಯ. ಆದ್ದರಿಂದ ಇಲ್ಲಿ ಕಾಂಗ್ರೆಸ್ ಮತ್ತು ಮಹಾ ವಿಕಾಸ್ ಆಘಾಡಿ ಒಕ್ಕೂಟ ಅಧಿಕಾರಕ್ಕೆ ಬಂದರೆ ಎಲ್ಲಾ ಗ್ಯಾರಂಟಿಗಳನ್ನು ಜಾರಿ ಮಾಡುತ್ತಾರೆ. ಅನುಮಾನ ಬೇಡ ಎಂದರು.

ಆದ್ದರಿಂದ ಮಹಾರಾಷ್ಟ್ರ ಜನತೆ ಮಹಾ ವಿಕಾಸ್ ಅಘಾಡಿಯನ್ನು ಗೆಲ್ಲಿಸುವ ಮೂಲಕ ಮಹಾರಾಷ್ಟ್ರದ ಅಭಿವೃದ್ಧಿ ಮತ್ತು ಮಹಾರಾಷ್ಟ್ರದ ಜನತೆಯ ಆರ್ಥಿಕ ಪ್ರಗತಿಗೆ ಕಾರಣರಾಗಬೇಕು ಎಂದು ವಿನಂತಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...