ಮಡಿಕೇರಿ : ಕೃಷಿ ಯಾಂತ್ರೀಕರಣ ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣೆ ಕಾರ್ಯಕ್ರಮದಲ್ಲಿ ಸಾಮಾನ್ಯ ವರ್ಗದ ರೈತರಿಗೆ ಶೇ.50 ರ ರಿಯಾಯಿತಿಯಲ್ಲಿ ಮತ್ತು ಪರಿಶಿಷ್ಟ ಜಾತಿ ಮತ್ತು ವರ್ಗದ ರೈತರಿಗೆ ಶೇ.90 ರ ರಿಯಾಯಿತಿಯಲ್ಲಿ ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್, ರೋಟೋವೇಟರ್, ಕಳೆ ಕೊಚ್ಚುವ ಯಂತ್ರಗಳು, ಪವರ್ ವೀಡರ್, ಪವರ್ ಸ್ಪ್ರೇಯರ್ಸ್, ಡೀಸೆಲ್ ಪಂಪ್ಸೆಟ್, ಪ್ಲೋರ್ಮಿಲ್, ಯಂತ್ರ ಚಾಲಿತ ಮೋಟೋಕಾರ್ಟ್, ಮೋಟಾರ್ ಚಾಲಿತ ಸಣ್ಣ ಎಣ್ಣೆಗಾಣಗಳು ಮತ್ತು ಇತರೆ ಹೈಟೆಕ್ ಕೃಷಿ ಉಪಕರಣಗಳನ್ನು ಹಾಗೂ ತುಂತುರು ನೀರಾವರಿ ಯೋಜನೆಯಡಿಯಲ್ಲಿ ಶೇ.90ರ ರಿಯಾಯ್ತಿ ದರದಲ್ಲಿ ತುಂತುರು ನೀರಾವರಿ ಘಟಕ(ಹೆಚ್ಡಿಪಿಇ ಪೈಪ್ಸ್) ವಿತರಿಸಲಾಗುತ್ತಿದೆ.
ಮಡಿಕೇರಿ ತಾಲ್ಲೂಕು ವ್ಯಾಪ್ತಿಯ ಆಸಕ್ತ ರೈತರು ಪಹಣಿ(ಆರ್ಟಿಸಿ), ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್, ಎರಡು ಭಾವಚಿತ್ರ, ರೂ.100 ರ ಛಾಪಾ ಕಾಗಗದೊಂದಿಗೆ ಹೋಬಳಿಯಲ್ಲಿರುವ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ರೈತರಿಗೆ ನೀರು ಸಂಗ್ರಹಣಾ ರಚನೆ(ಕೃಷಿ ಹೊಂಡ), ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ ನಿರ್ಮಾಣ, ಹೊಂಡದಿಂದ ನೀರು ಎತ್ತಲು ಡೀಸೆಲ್/ ಸೋಲಾರ್ ಪಂಪ್ ಸೆಟ್(ಅಪ್ ಟು 10 ಹೆಚ್ಪಿ) ಮತ್ತು ಬೆಳೆಗೆ ನೀರು ಹಾಯಿಸಲು ಸೂಕ್ಷ್ಮ ನೀರಾವರಿ ಘಟಕಗಳ ಸೌಲಭ್ಯಗಳನ್ನು ಸಾಮಾನ್ಯ ರೈತರಿಗೆ ಶೇ.80ರ ಸಹಾಯಧನದಲ್ಲಿ /ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇ.90ರ ಸಹಾಯಧನದಲ್ಲಿ ನೀಡಲಾಗುವುದು.
ಕೃಷಿ ಭಾಗ್ಯ ಯೋಜನೆಗೆ ರೈತರು ಒಟ್ಟು ಸಾಗುವಳಿ ಕ್ಷೇತ್ರದ ಒಂದು ಸರ್ವೇ ನಂಬರ್ನಲ್ಲಿ ಕನಿಷ್ಠ 1 ಎಕರೆ ಭೂಮಿ ಹೊಂದಿರಬೇಕು. ಹಿಂದಿನ ಸಾಲುಗಳಲ್ಲಿ ಕೃಷಿ ಭಾಗ್ಯ ಯೋಜನೆ ಅಥವಾ ಇನ್ನಾವುದೇ ಯೋಜನೆಯಡಿ ಕೃಷಿ ಹೊಂಡ ಫಲಾನುಭವಿಯಾಗಿರುವ ರೈತರು ಈ ಯೋಜನೆಗೆ ಅರ್ಹತೆ ಹೊಂದಿರುವುದಿಲ್ಲ(ಕೆ ಕಿಸಾನ್ ಪೋರ್ಟಲ್ನಲ್ಲಿ ಭೌತಿಕವಾಗಿ ಸ್ಥಳ ಪರಿಶೀಲಿಸಿ ಖಾತರಿಪಡಿಸಿಕೊಳ್ಳುವುದು).
ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಮತ್ತು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಮಡಿಕೇರಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.