ಮೈಸೂರು: ಮುಡಾ ಹಗರಣದ ದೂರುದಾರ, ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಮೈಸೂರಿನಲ್ಲಿ ಮತ್ತೊಂದು ದೂರು ದಾಖಲಾಗಿದೆ.
ಸ್ನೇಹಮಯಿ ಕೃಷ್ಣ ಬಂಧನ ಹಾಗೂ ಗಡಿಪಾರಿಗೆ ಒತ್ತಾಯಿಸಿ ಕಾಂಗ್ರೆಸ್ ಮುಖಂಡರು ಮೈಸೂರಿನ ಲಕ್ಷ್ಮೀಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೆ.ಪಿ.ಸಿ.ಸಿ ವಕ್ತಾರ ಎಂ.ಲಕ್ಷ್ಮಣ್ ಸುದ್ದಿಗಾರರೊಂದಿಗೆ ಮಾತನಾಡಿ, ಎರಡು ತಿಂಗಳ ಹಿಂದೆ ಸ್ನೇಹಮಯಿ ಕೃಷ್ಣ ಅವರ ಸ್ನೇಹಿತರು ಎಂದು ಹೇಳಿಕೊಂಡು ಇಬ್ಬರು ನನ್ನನ್ನು ಸಂಪರ್ಕಿಸಿದ್ದರು. ಪ್ರಕರಣ ಮುಚ್ಚಿ ಹಾಕಲು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮೂರು ದಿನಗಳ ಹಿಂದೆ ಮತ್ತೆ ಈ ಇಬ್ಬರು ನನ್ನನ್ನು ಸಂಪರ್ಕಿಸಿ ನನಗೆ ಬೆದರಿಕೆ ಹಾಕಿದ್ದಾರೆ. ಸ್ನೇಹಮಯಿ ಕೃಷ್ಣ ವಿರುದ್ಧ ಆರೋಪ ಮುಂದುವರೆಸಿದರೆ ನಿಮ್ಮ ವಿರುದ್ಧವೂ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.
ಸ್ನೇಹಮಯಿ ಕೃಷ್ಣ ವಿರುದ್ಧ ರಾಜ್ಯದ ವಿವಿಧ ಠಾಣೆಗಳಲ್ಲಿ 44 ಪ್ರಕರಣಗಳಿವೆ. ಇದರಲ್ಲಿ 22 ಪ್ರಕರಣಗಳ ಎಫ್ಐಆರ್ ನನ್ನಲ್ಲಿದೆ. ಈತ ರೌಡಿಶೀಟರ್ ಆಗಿದ್ದರೂ ಕಳೆದ ಮೂರು ವರ್ಷಗಳಿಂದ ಪೊಲೀಸರು ಆತನ ವಿರುದ್ಧ ಕ್ರಮ ಕೈಗೊಂಡಿಲ್ಲ. ಬ್ಲ್ಯಾಕ್ ಮೇಲ್ ಮಾಡುತ್ತಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಬಂಧಿಸಬೇಕು ಎಂದು ದೂರು ನೀಡಿದ್ದಾಗಿ ತಿಳಿಸಿದ್ದಾರೆ.