ಬೆಂಗಳೂರು: ರಾಜ್ಯದಲ್ಲಿ ಅನರ್ಹರ 22 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಿದ ಆಹಾರ ಇಲಾಖೆ ಆಧಾರ್ ದೃಢೀಕರಣ ಮಾಡದ ಕಾರಣಕ್ಕೆ ಲಕ್ಷಾಂತರ ಎಪಿಎಲ್ ಕಾರ್ಡುಗಳನ್ನು ಕೂಡ ರದ್ದು ಮಾಡಿದೆ.
ಎಪಿಎಲ್ ಕಾರ್ಡ್ ಗಳಿಗೆ ನೀಡಲಾಗುತ್ತಿದ್ದ ರೇಷನ್ ಹಂಚಿಕೆಯನ್ನು ನಿಲ್ಲಿಸಲಾಗಿದೆ. ಇದರಿಂದಾಗಿ ಆಯುಷ್, ವಿಮೆ, ಗೃಹಲಕ್ಷ್ಮಿ ಹಣ ಸೇರಿ ಹಲವು ಸೌಲಭ್ಯ ಪಡೆಯುತ್ತಿದ್ದ ಎಪಿಎಲ್ ಕಾರ್ಡ್ ದಾರರಿಗೆ ತೊಂದರೆಯಾಗಿದೆ.
ರಾಜ್ಯದ್ಯಂತ ರೇಷನ್ ಕಾರ್ಡ್ ಪರಿಶೀಲನೆ ಕಾರ್ಯ ಕೈಗೊಂಡ ಆಹಾರ ಇಲಾಖೆ ಇ- ಕೆವೈಸಿ ಮಾಡಿಸಲು ಸೂಚನೆ ನೀಡಿತ್ತು. ಈ ವೇಳೆ ಲಕ್ಷಾಂತರ ಬೋಗಸ್ ಕಾರ್ಡ್ ಗಳು ಪತ್ತೆಯಾಗಿದ್ದು, ಅಂತಹ ಕಾರ್ಡುಗಳನ್ನು ರದ್ದು ಮಾಡಲಾಗಿದೆ.
ಎಪಿಎಲ್ ಕಾರ್ಡ್ ರದ್ದಾಗಿದ್ದರಿಂದ ಗೃಹಲಕ್ಷ್ಮಿ ಯೋಜನೆಯಡಿ ಪಡೆಯುತ್ತಿದ್ದ ಹಣ ಸ್ಥಗಿತವಾಗಿದೆ. ಸರ್ಕಾರಿ ಕೆಲಸಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ವಿವಿಧ ಸರ್ಕಾರಿ ಸೌಲಭ್ಯಗಳು ಸಿಗುವುದಿಲ್ಲ. ಆಯುಷ್ಮಾನ್ ಭಾರತ್ ಯೋಜನೆ ಲಾಭ ಪಡೆಯಲು, ರಿಯಾಯಿತಿ ದರದಲ್ಲಿ ಅಕ್ಕಿ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗೆ ಅನೇಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಹೇಳಲಾಗಿದೆ.