ಮೈಸೂರು: ತನ್ನನ್ನು ಕರಿಯ ಎಂದು ಕರೆದಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಹೆಚ್.ಡಿ.ಕೆ ನನ್ನನ್ನು ಪ್ರೀತಿಯಿಂದ ಕುಳ್ಳ ಎನ್ನುತ್ತಿದ್ದರು, ನಾನು ಅವರನ್ನು ಕರಿಯಣ್ಣ ಎನ್ನುತ್ತಿದ್ದೆ ಎಂದು ಸಮಜಾಯಿಷಿ ನೀಡಿದ್ದ ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಾನೆಂದೂ ಜಮೀರ್ ಅಹ್ಮದ್ ರನ್ನು ಕುಳ್ಳ ಎಂದು ಕರೆದಿಲ್ಲ ಎಂದಿದ್ದಾರೆ.
ಬಸವರಾಜ್ ಹೊರಟ್ಟಿ ಅಂದು ಒಮ್ಮೆ ನನ್ನನ್ನು ಕುಮಾರ ಎಂದಾಗ ಅವರನ್ನು ಹೊಡೆಯಲು ಹೋಗಿದ್ದ ಗಿರಾಕಿ ಇವರು. ಹೊರಟ್ಟಿ ಅವರನ್ನೇ ಕೇಳಬಹುದು ಅವತ್ತು ಜಮೀರ್ ಹೊಡೆಯಲು ಬಂದಿರಲಿಲ್ಲವಾ ಅಂತ? ಕರಿಯ, ಕುಳ್ಳ ಅಂತ ಮಾತನಾಡಿಸಿಕೊಳ್ಳುವ ಸಂಸ್ಕೃತಿಯಿಂದ ಬಂದವನಾನಲ್ಲ. ಅವರ ಮಾತುಗಳು ಅವರ ಸಂಸ್ಕೃತಿಯನ್ನು ತೋರುತ್ತದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಜಮೀರ್ ಅಹ್ಮದ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದು ನಾಗರಿಕ ಸರ್ಕಾರನಾ? ಇಂತ ಮಾತು ಹೇಳಿದವರ ಮೇಲೆ ಎಷ್ಟು ಕೇಸ್ ಹಾಕಿ ಜೈಲಿಗೆ ಹಾಕಿಲ್ಲ ಸರ್ಕಾರ? ಈಗೇಕೆ ಸುಮ್ಮನಿದೆ? ಎಂದು ಪ್ರಶ್ನಿಸಿದರು.
ನಾನೆಂದೂ ಜಮೀರ್ ಅವರನ್ನು ಕುಳ್ಳ ಎಂದು ಕರೆದಿಲ್ಲ. ನಮ್ಮ ಸ್ನೇಹ ಇದ್ದಿದ್ದು ರಾಜಕೀಯವಾಗಿ ಅಷ್ಟೇ. ಈಗ ಅಧಿಕಾರ, ದುಡ್ಡಿನ ಮದದಿಂದ ಈ ರೀತಿ ಮಾತಾಡುತ್ತಿದ್ದಾರೆ ಎಂದು ಕಿಡಿಕಾರಿದರು.