alex Certify ಜನರ ಆಶೀರ್ವಾದ ಇರುವವರೆಗೂ ಬಿಜೆಪಿ, ಕೇಂದ್ರದ ಷಡ್ಯಂತ್ರಗಳಿಗೆ ಜಗ್ಗಲ್ಲ, ಬಗ್ಗಲ್ಲ: ಸಿದ್ಧರಾಮಯ್ಯ ಗುಡುಗು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನರ ಆಶೀರ್ವಾದ ಇರುವವರೆಗೂ ಬಿಜೆಪಿ, ಕೇಂದ್ರದ ಷಡ್ಯಂತ್ರಗಳಿಗೆ ಜಗ್ಗಲ್ಲ, ಬಗ್ಗಲ್ಲ: ಸಿದ್ಧರಾಮಯ್ಯ ಗುಡುಗು

ಮೈಸೂರು: ಇಡಿ, ಐಟಿ, ಸಿಬಿಐ ಹಾಗೂ ರಾಜ್ಯಪಾಲರನ್ನು ದುರುಪಯೋಗ ಪಡಿಸಿಕೊಂಡು ಆಟ ಆಡ್ತೀರಾ? ಅರವಿಂದ್ ಕೇಜ್ರಿವಾಲ್ ಆಯ್ತು. ಈಗ ನಾನು ಮತ್ತು ನನ್ನ ಪತ್ನಿಯನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಸಿಎಂ ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ 470 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ನಾನು ನಿನ್ನೆ ಮೊನ್ನೆ ಮಂತ್ರಿಯಾದವನಲ್ಲ. 40 ವರ್ಷದಿಂದ ಮಂತ್ರಿಯಾಗಿದ್ದೀನಿ. ಸುಳ್ಳು ಕೇಸಲ್ಲಿ ನನ್ನನ್ನು, ನನ್ನ ಧರ್ಮಪತ್ನಿಯನ್ನು ಎಳೀತೀರಾ? ರಾಜ್ಯದ ಜನರೇನು ಮೂರ್ಖರಾ. ರಾಜ್ಯದ ಜನ‌ರ ಆಶೀರ್ವಾದ ನನ್ನ ಮೇಲೆ ಇರುವವರೆಗೂ ನಾನು ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಷಡ್ಯಂತ್ರಗಳಿಗೆ ಜಗ್ಗಲ್ಲ, ಬಗ್ಗಲ್ಲ. ನಾಡಿನ ಪ್ರಜ್ಞಾವಂತರು ಕೂಡ ಸುಖಾ ಸುಮ್ಮನೆ ಜನಾದೇಶದಿಂದ ಆಯ್ಕೆಯಾದ ಮುಖ್ಯಮಂತ್ರಿಯ ತಂಟೆಗೆ ಬಂದರೆ ಸುಮ್ಮನಿರಲ್ಲ ಎನ್ನುವ ಎಚ್ಚರಿಕೆ ಕೊಡಬೇಕಿದೆ ಎಂದರು.

ಬಿಜೆಪಿ ಇವತ್ತಿನವರೆಗೂ ರಾಜ್ಯದಲ್ಲಿ ಸ್ವಂತ ಶಕ್ತಿಯಿಂದ ಒಂದು ಬಾರಿಯೂ ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದ ಮೂಲಕ ಮಾತ್ರ ಅಧಿಕಾರಕ್ಕೆ ಬಂದಿದೆ. ಈ ಬಾರಿ ಕಾಂಗ್ರೆಸ್ಸಿನ 50 ಮಂದಿ ಶಾಸಕರಿಗೆ ತಲಾ 50 ಕೋಟಿ ಆಫರ್ ನೀಡಿ ಖರೀದಿಸಲು ಯತ್ನಿಸಿದ್ದಾರೆ. ಎಲ್ಲಿಂದ ಬರತ್ತೆ ಈ ಹಣ? ಯಡಿಯೂರಪ್ಪ, ಬೊಮ್ಮಾಯಿ, ಆರ್.ಅಶೋಕ್ ಪ್ರಿಂಟ್ ಹಾಕಿದ್ದಾ ಈ ಹಣ? ರಾಜ್ಯವನ್ನು ಲೂಟಿ ಹೊಡೆದ ಹಣ ತಾನೇ. ಆದರೆ ನಮ್ಮ ಶಾಸಕರು ಇವರ ಆಮಿಷಕ್ಕೆ ಒಳಗಾಗಲಿಲ್ಲ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ನಮ್ಮ ಐದೂ ಗ್ಯಾರಂಟಿಗಳು ಯಶಸ್ವಿಯಾಗಿ ಜಾರಿ ಆದ ಬಳಿಕ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಭಯಂಕರ ಸುಳ್ಳುಗಳನ್ನು ಹೊಸೆಯುತ್ತಿದ್ದಾರೆ. ರಾಜ್ಯ ಸರ್ಕಾರದ ಬಳಿ ಅಭಿವೃದ್ಧಿಗೆ ಹಣ ಇಲ್ಲ ಎನ್ನುವ ಹಸಿ ಹಸಿ ಸುಳ್ಳಿನ ಅಪಪ್ರಚಾರ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಗ್ಯಾರಂಟಿಗಳಿಗಾಗಿ 56 ಸಾವಿರ ಕೋಟಿ ರೂಪಾಯಿ ಕೊಟ್ಟರೆ, ಅಭಿವೃದ್ಧಿ ಕಾರ್ಯಗಳಿಗೆ 1.20 ಲಕ್ಷ ಕೋಟಿ ರೂ. ನೀಡಿದೆ.‌ ಇಂದು ನರಸೀಪುರದಲ್ಲಿ 470 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ದೊರೆತಿದೆ. ಬಿಜೆಪಿಯ ಸುಳ್ಳುಗಳಿಗೆ ಇವತ್ತಿನ ಅಭಿವೃದ್ಧಿ ಕಾರ್ಯಕ್ರಮ ಕನ್ನಡಿ ಹಿಡಿದಿದೆ ಎಂದು ಹೇಳಿದ್ದಾರೆ.

ಈ ಬಿಜೆಪಿಯವರಿಗೆ, ಗ್ಯಾರಂಟಿ ವಿರೋಧಿಗಳಿಗೆ ನಾನು ನೇರವಾಗಿ ಒಂದು ಪ್ರಶ್ನೆ ಕೇಳುತ್ತಿದ್ದೀನಿ. ರಾಜ್ಯದಲ್ಲಿ ಬಿಜೆಪಿಯವರು ನಮ್ಮ ಗ್ಯಾರಂಟಿಗಳ ಫಲಾನುಭವಿಗಳಲ್ಲವಾ? ಬಿಜೆಪಿಯವರು ಉಚಿತವಾಗಿ ಬಸ್ಸಲ್ಲಿ ಓಡಾಡುತ್ತಿಲ್ಲವಾ? ಬಿಜೆಪಿಯವರು ಉಚಿತ ವಿದ್ಯುತ್ ಪಡೆಯುತ್ತಿಲ್ಲವಾ? ಬಿಜೆಪಿಯವರು ಗೃಹಲಕ್ಷ್ಮಿ ಹಣ ಪಡೆಯುತ್ತಿಲ್ಲವಾ?  ಇಲ್ಲಾ, ನಾವು ತೆಗೆದುಕೊಳ್ಳುತ್ತಿಲ್ಲ ಇಲ್ಲ ಎಂದು ಎದೆ ಮುಟ್ಟಿಕೊಂಡು ಹೇಳಲಿ ನೋಡೋಣ. ರಾಜ್ಯ ಸರ್ಕಾರದ ಗ್ಯಾರಂಟಿ ಫಲಾನುಭವಿಗಳನ್ನು ಅವಮಾನಿಸಿ, ಅಪಪ್ರಚಾರ ಮಾಡುವುದನ್ನು ನಿಲ್ಲಿಸದಿದ್ದರೆ ಕೋಟಿ ಕೋಟಿ ಫಲಾನುಭವಿಗಳು ನಿಮಗೆ ಸರಿಯಾದ ಪಾಠ ಕಲಿಸ್ತಾರೆ ಎಂದು ಎಚ್ಚರಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...