ಬೆಂಗಳೂರು : ರಾಜ್ಯಾದ್ಯಂತ 40 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಹಣ, ಆಸ್ತಿ ಪತ್ರಗಳನ್ನು ಪತ್ತೆ ಮಾಡಿದ್ದಾರೆ.
ಕರ್ನಾಟಕ ಲೋಕಾಯುಕ್ತರು ಮಂಗಳವಾರ ರಾಜ್ಯದ ವಿವಿಧ ಭಾಗಗಳಲ್ಲಿ ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಬೆಳಗಾವಿ, ಹಾವೇರಿ, ದಾವಣಗೆರೆ, ಕಲಬುರಗಿ, ಮೈಸೂರು, ರಾಮನಗರ ಮತ್ತು ಧಾರವಾಡ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಬೆಳಿಗ್ಗೆಯಿಂದ ದಾಳಿ ನಡೆಯುತ್ತಿದೆ . ದಾಳಿ ವೇಳೆ ಅಪಾರ ಪ್ರಮಾಣದ ಹಣ ಆಸ್ತಿ ಪತ್ರಗಳು ಪತ್ತೆಯಾಗಿದೆ.
ಬೆಳಿಗ್ಗೆಯಿಂದಲೇ ರಾಜ್ಯದ ವಿವಿಧೆಡೆ ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳ ಚಳಿ ಬಿಡಿಸಿದ್ದಾರೆ.ಹಾವೇರಿಯಲ್ಲಿ ಇಬ್ಬರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ ನೇತೃತ್ವದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ್ ಮನೆ ಮೇಲೆ ದಾಳಿ ನಡೆಸಲಾಗಿದೆ. ಇನ್ನೊಂದೆಡೆ ರಾಜ್ಯ ಪಂಚಾಯತ್ ಇಂಜಿನಿಯರಿಂಗ್ ಸಹಾಯಕ ಇಂಜಿನಿಯರ್ ಕಾಶಿನಾಥ್ ಭಜಂತ್ರಿ ಮನೆ ಮೇಲೆ ದಾಳಿ ನಡೆದಿದೆ.
ಇಂಜಿನಿಯರ್ ಕಾಶಿನಾಥ್ ಭಜಂತ್ರಿ ಲಕ್ಷ ಲಕ್ಷ ಹಣವನ್ನು ತನ್ನ ಬೆಡ್ ರೂಂ ನಲ್ಲಿ ಹಾಸಿಗೆ ಕೆಳಗೆ ಬಚ್ಚಿಟ್ಟಿದ್ದಾರೆ. ಅಧಿಕಾರಿಗಳು ಮನೆ ಮೇಲೆ ದಾಳಿ ನಡೆಸುತ್ತಿದ್ದಂತೆ 9 ಲಕ್ಷ ರೂಪಾಯಿ ಹಣವನ್ನು ಎರಡು ಗಂಟ್ ಗಳಲ್ಲಿ ಕಟ್ಟಿ ಕಿಟಕಿಯಿಂದ ಹೊರಗೆ ಬಿಸಾಕಿದ್ದಾರೆ.ದಾಳಿ ವೇಳೆ ಕಾಶಿನಾಥ್ ಭಜಂತ್ರಿ ನಿವಾಸದಲ್ಲಿ ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.