ತಹಶೀಲ್ದಾರ್ ಕಚೇರಿಯಲ್ಲಿ SDA ಆತ್ಮಹತ್ಯೆ ಪ್ರಕರಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು?

 

ಬೆಳಗಾವಿ: ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಎಸ್ ಡಿಎ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಸೇರಿದಂತೆ ಮೂವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಈ ಪ್ರಕರಣದ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೊದಲ ಪ್ರತಿಕ್ರಿಯೆ ನೀಡಿದ್ದು, ನಿಸ್ಪಕ್ಷಪಾತವಾಗಿ ತನಿಖೆ ನಡೆಯಲಿ ಎಂದಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಇಂಥಹ ಘಟನೆಗಳು ನಡೆಯಬಾರದು. ಘಟನೆ ಬಗ್ಗೆ ನನಗೂ ಮಾಧ್ಯಮಗಳ ಮೂಲಕವೇ ಗೊತ್ತಾಯಿತು ಎಂದಿದ್ದಾರೆ.

ಪ್ರಕರಣದಲ್ಲಿ ತಮ್ಮ ಆಪ್ತ ಸಹಾಯಕನ ಹೆಸರು ಉಲ್ಲೇಖವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ಇದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಾನು ನಿನ್ನೆ ಇಡೀ ದಿನ ಬ್ಯುಸಿ ಇದ್ದೆ. ಸಚಿವರಾದ ಹೆಚ್.ಕೆ ಪಾಟೀಲ್ ಬೆಳಗಾವಿಗೆ ಬಂದಿದ್ದರು. ಆ ಕಾರ್ಯಕ್ರಮದಲ್ಲಿ ಇದ್ದೆ. ಇನ್ನು ಮೃತ ರುದ್ರಣ್ಣ ಅವರನ್ನು ನಾನು ಯಾವತ್ತೂ ಭೇಟಿಯಾಗಿಲ್ಲ. ಯಾವುದೇ ಕೆಲಸಕ್ಕೂ ಸಂಪರ್ಕ ಮಾಡಿಲ್ಲ. ತನಿಖೆ ನಡೆಯುತ್ತಿದೆ. ಮಂತ್ರಿ ಎಂದ ಮೇಲೆ 10-15 ಜನರು ಆಪ್ತ ಸಹಾಯಕರು ಇರುವುದು ಸ್ವಾಭಾವಿಕ. ಕ್ಷೇತ್ರದ ಕೆಲಸ, ಇತರೆ ಕೆಲಸಗಳಿಗಾಗಿ ಪಿಎಗಳನ್ನು ನೇಮಕ ಮಾಡಿಕೊಂಡಿರುತ್ತೇವೆ ಎಂದರು.

ರುದ್ರಣ್ಣ ಕುಟುಂಬಕ್ಕೆ ನಾನು ಕೂಡ ಧೈರ್ಯ ತುಂಬಿ ಸಾಂತ್ವನ ಹೇಳುತ್ತೇನೆ. ಪ್ರಕರಣದ ಬಗ್ಗೆ ನಿಸ್ಪಕ್ಷಪಾತ ತನಿಖೆ ನಡೆದು ಸತ್ಯಾಸತ್ಯತೆ ಹೊರಬರಲಿ. ಊಹಾಪೋಹಗಳಿಗೆ ತೆರೆ ಬೀಳಲಿ ಕುಟುಂಬಕ್ಕೆ ನ್ಯಾಯ ಸಿಗಲಿ. ನಾನೂ ಕೂಡ ಜಿಲ್ಲಾಧಿಕಾರಿಗಳು, ಪೊಲೀಸರ ಜೊತೆ ಸಂಪರ್ಕದಲ್ಲಿದ್ದು, ಕೂಲಂಕುಷ ತನಿಖೆ ನಡೆಸುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.

ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಎಸ್ ಡಿಎ ಆಗಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ರುದ್ರಣ್ಣ ಯಡವಣ್ಣವರ್,ಸವದತ್ತಿಗೆ ವರ್ಗಾವಣೆಗೊಂಡಿದ್ದರು. ನ.5ರಂದು ಸವದತ್ತಿಯಲ್ಲಿ ಡ್ಯೂಟಿಗೆ ಹಾಜರಾಗಬೇಕಾದವರು ರಾತ್ರಿಬೆಳಗಾಗುವಷ್ಟರಲ್ಲಿ ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಬಸವರಾಜ್ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದರು. ಆತ್ಮಹತ್ಯೆಗೂ ಮುನ್ನ ರುದ್ರಣ್ಣ, ತನ್ನ ಸಾವಿಗೆ ತಹಶೀಲ್ದಾರ್ ಬಸವರಾಜ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಸೋಮು, ಅಶೋಕ್ ಕಾರಣ ಎಂದು ವಾಟ್ಸಪ್ ಗ್ರೂಪ್ ನಲ್ಲಿ ಸಂದೇಶ ರವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read