ಬೆಂಗಳೂರು: ಬಿಬಿಎಂಪಿ ಗುತ್ತಿಗೆದಾರರಿಗೆ ತಡೆಹಿಡಿದಿದ್ದ ಬಾಕಿ ಹಣ ಬಿಡುಗಡೆಗೆ ಸರ್ಕಾರ ಆದೇಶಿಸಿದೆ. ಶೇ. 10ರಷ್ಟು ಬ್ಯಾಂಕ್ ಗ್ಯಾರಂಟಿ ಉಳಿಸಿ ಉಳಿದ ಹಣ ಬಿಡುಗಡೆಗೆ ಮಾಡಲಾಗುವುದು.
ಬಿಬಿಎಂಪಿ ಕಾಮಗಾರಿಗಳ ಸಂಬಂಧ ಬಿಲ್ ಪಾವತಿ ವೇಳೆ ತಡೆಹಿಡಿಯಲಾಗಿದ್ದ ಶೇಕಡ 25ರಷ್ಟು ಹಣ ಬಿಡುಗಡೆ ಮಾಡುವಂತೆ ಪಾಲಿಕೆಗೆ ರಾಜ್ಯ ಸರ್ಕಾರ ಆದೇಶಸಿದೆ. ಬಿಬಿಎಂಪಿ ಕಾಮಗಾರಿಗಳ ಕುರಿತು ಪರಿಶೀಲಿಸಲು ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ ಹಿನ್ನೆಲೆಯಲ್ಲಿ ಕಾಮಗಾರಿ ಬಿಲ್ ಪಾವತಿ ಮೇಲೆ ಶೇಕಡ 25ರಷ್ಟು ಹಣ ತಡೆ ಹಿಡಿದು ಉಳಿದ ಮೊತ್ತವನ್ನು ಗುತ್ತಿಗೆದಾರರಿಗೆ ಬಿಡುಗಡೆ ಮಾಡಲಾಗಿತ್ತು.
ಇದಕ್ಕೆ ಆಕ್ಷೇಪಿಸಿದ್ದ ಗುತ್ತಿಗೆದಾರರು ಸಿಎಂ, ಡಿಸಿಎಂಗೆ ಮನವಿ ಮಾಡಿ ತಡೆಹಿಡಿದ ಮೊತ್ತ ಬಿಡುಗಡೆಗೆ ಒತ್ತಾಯಿಸಿದ್ದರು. ಅದರಂತೆ ಪಾಲಿಕೆ ಮುಖ್ಯ ಆಯುಕ್ತರು ತಡೆಹಿಡಿಯಲಾದ ಶೇಕಡ 25ರಷ್ಟು ಬಾಕಿ ಬಿಲ್ ಬಿಡುಗಡೆಗೆ ಸಲ್ಲಿಸಿದ್ದ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ಸೂಚಿಸಿ ಆದೇಶಿಸಿದೆ. ಕಾಮಗಾರಿಗಳ ಪರಿಶೀಲನೆಗೆ ಸಂಬಂಧಿಸಿದ ಸಮಿತಿಯ ಅಂತಿಮ ವರದಿ ತೀರ್ಮಾನಕ್ಕೆ ಒಳಪಟ್ಟು ತಡೆಹಿಡಿಯಲಾದ ಮೊತ್ತ ಬಿಡುಗಡೆಗೆ ಆದೇಶಿಸಲಾಗಿದೆ.