ಆನ್‌ಲೈನ್ ಶಾಪಿಂಗ್ ಯುಗದಲ್ಲಿ, ಉತ್ಪನ್ನಗಳನ್ನು ಆರ್ಡರ್ ಮಾಡುವಾಗ ಹೆಚ್ಚಿನ ಗ್ರಾಹಕರು ಅನುಕೂಲತೆ ಮತ್ತು ವಿಶ್ವಾಸಾರ್ಹತೆಯನ್ನು ನಿರೀಕ್ಷಿಸುತ್ತಾರೆ. ಆದಾಗ್ಯೂ, ಯುನೈಟೆಡ್ ಕಿಂಗ್‌ಡಮ್ ನ ಕಿರ್ಬಿಯ ಒಬ್ಬ ಯುವತಿಗೆ, ಆನ್‌ಲೈನ್ ಶಾಪಿಂಗ್ ಅನುಭವ ದುಃಸ್ವಪ್ನವಾಗಿ ಮಾರ್ಪಟ್ಟಿದೆ.
ಅಮೆಜಾನ್‌ನಿಂದ ಬೈಸಿಕಲ್ ಹೆಲ್ಮೆಟ್ ಖರೀದಿ ಮಾಡಿದ್ದ ಆಕೆ ಬಂದ ಪಾರ್ಸೆಲ್ ನೋಡಿ ಬೆಚ್ಚಿಬಿದ್ದಿದ್ದಾಳೆ. ಅಷ್ಟೇ ಅಲ್ಲ ವಾಂತಿ ಕೂಡ ಮಾಡಿಕೊಂಡಿದ್ದಾಳೆ.
ಆನ್‌ಲೈನ್ ಶಾಪರ್ ಆಗಿರುವ ರಾಚೆಲ್ ಮ್ಯಾಕ್ ಆಡಮ್ ತನ್ನ ಹೊಸ ಹೆಲ್ಮೆಟ್‌ನ ಆಗಮನಕ್ಕಾಗಿ ಕಾತರದಿಂದ ಕಾಯುತ್ತಿದ್ದರು. ಅಂತಿಮವಾಗಿ ಪಾರ್ಸೆಲ್ ಬಂದಾಗ, ಅದನ್ನು ತೆರೆದಿದ್ದು, ತಕ್ಷಣವೇ ಅದರಿಂದ ಬಂದ ಕೊಳೆತ ವಾಸನೆಯಿಂದ ಬೆಚ್ಚಿಬಿದ್ದಿದ್ದಾರೆ. ಇದರಿಂದ ಮೆಕ್‌ಆಡಮ್ ಗೆ ವಾಂತಿಯಾಗಿದೆ.
ಪೆಟ್ಟಿಗೆಯೊಳಗೆ ಹೆಲ್ಮೆಟ್ ಬದಲು ಬ್ರೆಡ್ ತುಂಡುಗಳು, ಇಲಿ ಹಿಕ್ಕೆ ಇತ್ತು. ಹೆಚ್ಚಿನ ತಪಾಸಣೆ ನಡೆಸಿದಾಗ ಪೆಟ್ಟಿಗೆಯ ಬದಿಯಲ್ಲಿ ರಂಧ್ರವಿದ್ದು, ಅದನ್ನು ತೆರೆದಾಗ ಅರ್ಧ ಕೊಳೆತ ಇಲಿ ಕಂಡು ಬಂದಿದೆ.
ಆಕೆ ತಕ್ಷಣ Amazon ನ ಗ್ರಾಹಕ ಸೇವೆಯನ್ನು ಸಂಪರ್ಕಿಸಿದ್ದು, ಅಮೆಜಾನ್ ಘಟನೆಗೆ ಕ್ಷಮೆ ಯಾಚಿಸಿರುವುದಲ್ಲದೆ ಸಂಪೂರ್ಣ ಮರುಪಾವತಿಗೆ ಒಪ್ಪಿಕೊಂಡಿದೆ.