ಬೆಂಗಳೂರು: ಸಿಇಟಿ -2024ರಲ್ಲಿ ಸೀಟು ಪಡೆದು ಕಾಲೇಜುಗಳಿಗೆ ದಾಖಲಾಗದಿದ್ದರೆ ಅಂತಹ ವಿದ್ಯಾರ್ಥಿಗಳು ಮುಂದಿನ ಮೂರು ವರ್ಷ ಯಾವುದೇ ಕೋರ್ಸ್ ಗಳಿಗೂ ದಾಖಲಾಗದಂತೆ ಬ್ಯಾನ್ ಆಗಲಿದ್ದಾರೆ. ಇದರೊಂದಿಗೆ ಶುಲ್ಕದ 5 ಪಟ್ಟು ದಂಡ ಪಾವತಿ ಕಡ್ಡಾಯವಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೀಟು ಪಡೆದು ಕಾಲೇಜುಗಳಿಗೆ ಪ್ರವೇಶ ಪಡೆಯದಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಮುಂದಿನ ಮೂರು ವರ್ಷ ಬ್ಯಾನ್ ಮಾಡಲಾಗುವುದು. ಜೊತೆಗೆ ಶುಲ್ಕದ 5 ಪಟ್ಟು ಮೊತ್ತವನ್ನು ದಂಡದ ರೂಪದಲ್ಲಿ ಸರ್ಕಾರಕ್ಕೆ ಪಾವತಿಸಬೇಕಿದೆ.
ಸಿಇಟಿ ಎರಡನೇ ಮುಂದುವರೆದ ಸುತ್ತಿನ ಸೀಟು ಹಂಚಿಕೆ ನಂತರವೂ ಕಾಲೇಜುಗಳಿಗೆ ದಾಖಲಾಗದ ಮತ್ತು ಸೀಟುಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಹಿಂತಿರುಗಿಸದ 2600ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವರದಿ ಸಲ್ಲಿಸಲು ಮುಂದಾಗಿದೆ.