ಹಾಸನ: ಹಾಸನದ ಅದಿ ದೇವತೆ ಹಾಸನಾಂಬೆ ಜಾತ್ರೆಗೆ ತೆರೆಬಿದ್ದಿದ್ದು, 9 ದಿನಗಳಲ್ಲಿ ಕೋಟಿ ಕೋಟಿ ಹಣ ಹರಿದು ಬಂದಿದೆ. ಇತಿಹಾಸದಲ್ಲಿಯೇ ಮೊದಲ ಬಾರಿಗೆ ಹಾಸನಾಂಬೆ ದೇವಾಲಯಕ್ಕೆ ದಾಖಲೆ ಪ್ರಮಾಣದಲ್ಲಿ ಆದಾಯ ಸಂಗ್ರಹವಾಗಿದೆ.
ಹಾಸನಾಂಬೆ ದರ್ಶನೋತ್ಸವದಲ್ಲಿ ಕಳೆದ 9 ದಿನಗಳಲ್ಲಿ ಒಟ್ಟು 20 ಲಕ್ಷದ 40 ಸಾವಿರ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದಿದ್ದಾರೆ. ಭಕ್ತರಿಗೆ 1,000 ರೂ. ಹಾಗೂ 300 ರೂ.ಗಳ ಟಿಕೆಟ್ ಹಾಗೂ ಲಡ್ಡು ಪ್ರಸಾದ ವಿತರಣೆ ಮಾಡಲಾಗಿತ್ತು. ಈ ಎರಡರಿಂದಲೂ 9 ಕೋಟಿ 67 ಲಕ್ಷದ 27 ಸಾವಿರ ರೂಪಾಯಿ ಸಂಗ್ರಹವಾಗಿತ್ತು. ಆದರೆ ಹುಂಡಿ ಎಣಿಕೆ ಕಾರ್ಯ ನಡೆದಿರಲಿಲ್ಲ. ಇಂದು ಹುಂಡಿ ಎಣಿಕೆ ಕಾರ್ಯ ನಡೆದಿದ್ದು, 12 ಕೋಟಿ ರೂ.ಗೂ ಅಧಿಕ ಕಾಣಿಕೆ ಸಂಗ್ರಹವಾಗಿದೆ ಎಂದು ತಿಳಿದಿಬಂದಿದೆ.
7 ಗಂಟೆಗಳ ಕಾಲ 500 ಜನರಿಂದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಹಾಸನಾಂಬೆ ದರ್ಶನೋತ್ಸವದಲ್ಲಿ ಒಟ್ಟು 12,63,83,808 ಕೋಟಿ ರೂಪಾಯಿ ಸಂಗ್ರಹವಾಗಿದೆ. 51 ಗ್ರಾಂ ಚಿನ್ನ, 913 ಗ್ರಾಂ ಬೆಳ್ಳಿ ಕಾಣಿಕೆ ಕೂಡ ಸಂಗ್ರಹವಾಗಿದೆ. ಇತಿಹಾಸದಲ್ಲಿಯೇ ಮೊದಲ ಬಾರಿ ದೊಡ್ಡ ಪ್ರಮಾಣದಲ್ಲಿ ಕಾಣಿಕೆ ಸಂಗ್ರಹವಾಗಿದೆ.